ಮಂಗಳೂರು : ಕೆ ಟಿ ಗಟ್ಟಿ ಎಂದೇ ಖ್ಯಾತರಾಗಿದ್ದ ಹಿರಿಯ ಸಾಹಿತಿ ಕೂಡ್ಲು ತಿಮ್ಮಪ್ಪ ಗಟ್ಟಿ ಫೆಬ್ರವರಿ 19, ಸೋಮವಾರದಂದು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಕೂಡ್ಲು ತಿಮ್ಮಪ್ಪ ಗಟ್ಟಿ (ಕೆ.ಟಿ. ಗಟ್ಟಿ) ಅವರು ಒಬ್ಬ ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರು. ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ 1938ರ ಜುಲೈ 22ರಂದು ಜನಿಸಿದರು ಅವರ ತಂದೆ ಧೂಮಪ್ಪ ಗಟ್ಟಿಯವರು, ತಾಯಿ ಪರಮೇಶ್ವರಿ.
ಧೂಮಪ್ಪ ಗಟ್ಟಿ ಅವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಹೀಗಾಗಿ ಸಾಹಿತ್ಯದ ಒಲವು ಹುಟ್ಟಿನಿಂದಲೇ ಜಾಗೃತವಾಗಿತ್ತು ಕೆ.ಟಿ. ಗಟ್ಟಿ ಅವರಿಗೆ.
ಕಾಸರಗೋಡಿನಲ್ಲಿ ಎಂಟನೆಯ ತರಗತಿಯವರೆಗೆ ಶಿಕ್ಷಣ ಪಡೆದ ಅವರು, ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿ ಕಾಸರಗೋಡಿನ ಕನ್ನಡ ಚಳುವಳಿಯಲ್ಲಿ ಭಾಗಿಯಾಗಿದ್ದರು. ಕೇರಳ ವಿಶ್ವವಿದ್ಯಾಲಯದಿಂದ ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಪಡೆದರು.
25 ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಇಥಿಯೋಪಿಯಾದಲ್ಲಿಯೂ ಸೇವೆ ಸಲ್ಲಿಸಿದ್ದರು. ಇಥಿಯೋಪಿಯಾದಿಂದ ಮರಳಿದ ನಂತರ ಉಜಿರೆಯಲ್ಲಿ ಕೃಷಿ ಕೈಗೊಂಡರು.
ಅವರ ಮೊದಲ ಕಾದಂಬರಿ “ಶಬ್ದಗಳು” 1976 ರಲ್ಲಿ ಪ್ರಕಟವಾಯಿತು. ಅವರು 48 ಕಾದಂಬರಿಗಳು, ಐದು ಕಥಾ ಸಂಕಲನ, ಆರು ಪ್ರಬಂಧ ಸಂಕಲನ, 22 ನಾಟಕಗಳು, 14 ರೇಡಿಯೋ ನಾಟಕಗಳು, 2 ಕವನ ಸಂಕಲನಗಳನ್ನು ಮಕ್ಕಳ ನಾಟಕ ಮತ್ತು ಪ್ರವಾಸ ಕಥನಗಳನ್ನು ಬರೆದಿದ್ದಾರೆ.
ಕೆ ಟಿ ಗಟ್ಟಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಕಾದಂಬರಿಗಳು
ಶಬ್ದಗಳು (1976), ಸೌಮ್ಯ (1978), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಾಗಣ ಮನ್ಮರೀಗ ಇತ್ಯಾದಿ .


