ರಾಜ್ ಕೋಟ್ : ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮೂರನೇ ದಿನ ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಜೈಸ್ವಾಲ್ ಗಾಯಗೊಂಡು ನಿವೃತ್ತಿ ಗೊಂಡಿದ್ದರು. ಬಳಿಕ ನಾಲ್ಕನೇ ದಿನದಾಟದಲ್ಲಿ ಶುಭಮನ್ ಗಿಲ್ (91) ವಿಕೆಟ್ ಪತನದ ಬಳಿಕ ಮರಳಿ ಕ್ರೀಸ್‌ಗೆ ಬಂದು ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನ 2ನೇ ದ್ವಿಶತಕ ಬಾರಿಸಿದರು.
ಇದರೊಂದಿಗೆ ಟೆಸ್ಟ್ ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್ ಅಜೇಯ ದ್ವಿಶತಕ ಬಾರಿಸಿದ್ದಾರೆ. ಈ ದ್ವಿಶತಕದೊಂದಿಗೆ ಅವರ ಬ್ಯಾಟ್ನಿಂದ ಮೂಡಿಬಂದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 12.
ಈ ಹಿಂದೆ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ವಿನೋದ್ ಕಾಂಬ್ಳಿ (1993ರಲ್ಲಿ) ವಿರಾಟ್ ಕೊಹ್ಲಿ (2017ರಲ್ಲಿ) ಬ್ಯಾಕ್ ಟು ಬ್ಯಾಕ್ ದ್ವಿಶತಕ ಬಾರಿಸಿದ ಭಾರತೀಯ ಬ್ಯಾಟರ್‌ಗಳಾಗಿದ್ದರು .ಇದೀಗ ಬ್ಯಾಕ್ ಟು ಬ್ಯಾಕ್ ದ್ವಿಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು 22 ವರ್ಷದ ಯುವ ಎಡಗೈ ಬ್ಯಾಟರ್ ತಮ್ಮದಾಗಿಸಿಕೊಂಡಿದ್ದಾರೆ.