Friday, November 22, 2024
Flats for sale
Homeಸಿನಿಮಾಬೆಂಗಳೂರು : Zee ಥಿಯೇಟರ್ ನಿಂದ ಹೊಚ್ಚ ಹೊಸ ಟಾಕ್ ಶೋ `ಥಿಯೇಟರ್ ಟೇಲ್ಸ್’, ಹಿರಿಯ...

ಬೆಂಗಳೂರು : Zee ಥಿಯೇಟರ್ ನಿಂದ ಹೊಚ್ಚ ಹೊಸ ಟಾಕ್ ಶೋ `ಥಿಯೇಟರ್ ಟೇಲ್ಸ್’, ಹಿರಿಯ ರಂಗಭೂಮಿ ನಿರ್ದೇಶಕರು ನಡೆದು ಬಂದ ಹಾದಿಯ ಚಿತ್ರಣ.

ಬೆಂಗಳೂರು : ಕನ್ನಡ ರಂಗಭೂಮಿಗೆ 12 ನೇ ಶತಮಾನದಷ್ಟು ಶ್ರೀಮಂತ ಇತಿಹಾಸವಿದೆ. ಜಾನಪದ, ಧಾರ್ಮಿಕ ಮತ್ತು ಭಕ್ತಿ, ಐತಿಹಾಸಿಕ ಮಹಾಕಾವ್ಯಗಳು, ಸಂಗೀತ, ಹಾಸ್ಯಗಳು ಮತ್ತು ಸಮಕಾಲೀನ ನಾಟಕಗಳ ಸಮ್ಮಿಳಿತವನ್ನು ನಮ್ಮ ರಂಗಭೂಮಿ ಹೊಂದಿದೆ. ಕನ್ನಡ ರಂಗಭೂಮಿಗಷ್ಟೇ ಅಲ್ಲ, ಕನ್ನಡ ರಂಗಭೂಮಿ ಮತ್ತು ಕನ್ನಡತನದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುತ್ತಾ ಬಂದಿರುವ ಅನೇಕ ರಂಗಕರ್ಮಿಗಳು ನಮ್ಮ ನೆಲದಲ್ಲಿದ್ದಾರೆ. ಇಂತಹ ಸಾಧಕ ರಂಗಕರ್ಮಿಗಳು ನಡೆದುಬಂದ ಹಾದಿ ಮತ್ತು ಅವರ ಯಶೋಗಾಥೆಯನ್ನು ಹೇಳಲೆಂದೇ Zee ಥಿಯೇಟರ್ `ಥಿಯೇಟರ್ ಟೇಲ್’ ಅಂದರೆ ರಂಗಭೂಮಿ ಕತೆಗಳು ಎಂಬ ಹೆಸರಿನ ಹೊಸ ಚಾಟ್ ಶೋ ಅನ್ನು ಆರಂಭಿಸುತ್ತಿದೆ.

ಡಿಸೆಂಬರ್ 17, 2023 ರಂದು ಆರಂಭವಾಗಲಿರುವ ಈ ಚಾಟ್ ಶೋ ಕನ್ನಡ ಸಿನೆಮಾದೊಂದಿಗೆ ರಂಗಭೂಮಿಯು ಹೇಗೆ ಸಮ್ಮಿಳಿತಗೊಂಡಿದೆ ಎಂಬುದನ್ನೂ ಸಹ ಸೋದಾಹರಣವಾಗಿ ಅನಾವರಣಗೊಳಿಸಲಿದೆ. ಸಿಹಿ ಕಹಿ ಚಂದ್ರ, ಅವಿನಾಶ್ ಯಳಂದೂರ್, ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ಕೆ.ಎಂ.ಚೈತನ್ಯ, ರಂಗಾಯಣ ರಘು, ರಮೇಶ್ ಪಂಡಿತ್, ಎಂ.ಎಸ್.ಸತ್ಯು, ಪ್ರಸನ್ನ ಹೆಗ್ಗೋಡು, ಮಂಡ್ಯ ರಮೇಶ್, ಸುಂದರಶ್ರೀ, ಸಿ.ಮಂಗಳಾ, ಸುನೇತ್ರ ಪಂಡಿತ್, ಅರುಣ್ ಸಾಗರ್, ಎಂ.ಡಿ.ಪಲ್ಲವಿ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಅವರಂತಹ ಖ್ಯಾತನಾಮ ರಂಗಕರ್ಮಿಗಳೊಂದಿಗೆ ಸಂದರ್ಶನವಿರಲಿದೆ. ಡಿಸೆಂಬರ್ 17 ರಿಂದ ಟಾಟಾ ಪ್ಲೇ ಥಿಯೇಟರ್ ನಲ್ಲಿ ಪ್ರತಿ ಭಾನುವಾರ ಈ ಶೋ ಪ್ರಸಾರವಾಗಲಿದೆ. ಈ ಸಂಚಿಕೆಗಳನ್ನು Zee ಥಿಯೇಟರ್ ಯೂಟ್ಯೂಬ್ ಪೇಜ್ ನಲ್ಲಿಯೂ ಶುಕ್ರವಾರಗಳಂದು ವೀಕ್ಷಿಸಬಹುದಾಗಿದೆ.

`ಥಿಯೇಟರ್ ಟೇಲ್ಸ್’ನ ಪ್ರತಿಯೊಂದು ಸಂಚಿಕೆಯು ಎಲ್ಲಾ ಕಲಾವಿದರ ಜೀವನಚಿತ್ರವನ್ನು ಬಿಂಬಿಸುತ್ತವೆ. ಅವರ ಆರಂಭಿಕ ಜೀವನ, ರಂಗಭೂಮಿಯಲ್ಲಿನ ಒಡನಾಟ… ಹೀಗೆ ಅವರು ಸಾಗಿ ಬಂದ ಹಾದಿಯ ವಿವರಣೆಯನ್ನು ನೀಡುತ್ತದೆ. ಈ ಖ್ಯಾತನಾಮರಿಗೆ ತಮ್ಮ ಜೀವನದಲ್ಲಿ ಸ್ಫೂರ್ತಿ ನೀಡಿದ ಕ್ಷಣಗಳು, ವ್ಯಕ್ತಿಗಳು, ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಸವಾಲುಗಳು, ಜೀವನದ ಪ್ರಮುಖ ಘಟ್ಟಗಳು ಮತ್ತು ತಿರುವುಗಳು, ಗಳಿಸಿದ ಯಶಸ್ಸು ಸೇರಿದಂತೆ ಹತ್ತಾರು ಮಜಲುಗಳ ಬಗ್ಗೆ ಈ ಸಂಚಿಕೆಗಳು ಬೆಳಕು ಚೆಲ್ಲಲಿವೆ.

ಈ ವಿಶೇಷ ಸಂದರ್ಶನಗಳು ಕರ್ನಾಟಕದ ಪ್ರೇಕ್ಷಕರಿಗೆ ಮಾತ್ರ ಲಭ್ಯವಿಲ್ಲ. ಇದರ ಜೊತೆಗೆ ಪ್ರತಿಯೊಂದು ಸಂಚಿಕೆಯನ್ನು ಹಿಂದಿಗೆ ಡಬ್ ಮಾಡಲಿದ್ದು, ದೇಶಾದ್ಯಂತವಿರುವ ರಂಗಾಸಕ್ತರಿಗೂ ಸಂದರ್ಶನ ವೀಕ್ಷಿಸುವ ಸದಾವಕಾಶ ಲಭ್ಯವಾಗಲಿದೆ. ಈ ಥಿಯೇಟರ್ ಟೇಲ್’ ಆರಂಭಿಕ ಸಂಚಿಕೆಯ ಅತಿಥಿಯಾಗಿ ಹಿರಿಯ ರಂಗ ನಿರ್ದೇಶಕ ಮತ್ತು ನಾಟಕಕಾರ ಪ್ರಸನ್ನ ಹೆಗ್ಗೋಡು ಇರಲಿದ್ದಾರೆ. ಪ್ರಸನ್ನ ಹೆಗ್ಗೋಡು ಅವರು ಕರ್ನಾಟಕದ ಪ್ರಸಿದ್ಧ ಹವ್ಯಾಸಿ ನಾಟಕ ತಂಡವಾಗಿರುವಸಮುದಾಯ’ದ ಸ್ಥಾಪಕರು, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು ಮತ್ತು ಪ್ರಸ್ತುತ ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಶನ್ (IPTA)ದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇಂತಹ ಮೇರು ಕಲಾವಿದರನ್ನು ನಂದಿತಾ ಅವರು ಸಂದರ್ಶನ ಮಾಡಲಿದ್ದಾರೆ.
ಪ್ರಸನ್ನ ಹೆಗ್ಗೋಡು ಅವರು ತಮ್ಮ ವೃತ್ತಿ ರಂಗಭೂಮಿಯಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡಿದ ಹೊರತಾಗಿಯೂ, ತಾವು ಇದುವರೆಗೂ ಮಕ್ಕಳೊಂದಿಗೆ ನಾಟಕ ನಿರ್ಮಾಣ ಮಾಡಿಲ್ಲದಿರುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವರು, “ನಾನು ತುಂಬಾ ಕೋಪಿಷ್ಠ ಮತ್ತು ಮಕ್ಕಳಿಗೆ ನಟಿಸುವುದನ್ನು ಕಲಿಸುವ ಬಗ್ಗೆ ಯೋಚಿಸಲು ಸಾಧ್ಯವಾಗಲಿಲ್ಲ. ಆದರೆ, ನಾನೀಗ ಶಾಂತನಾಗಿದ್ದೇನೆ ಮತ್ತು ಹೆಚ್ಚು ತಾಳ್ಮೆಯನ್ನು ಹೊಂದಿದ್ದೇನೆ’’ ಎಂದು ಹೇಳಿಕೊಂಡಿದ್ದಾರೆ.

ಮಕ್ಕಳಲ್ಲಿನ ಸ್ವಾಭಾವಿಕ ಕುತೂಹಲವನ್ನು ಪೋಷಿಸುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ನಂಬಿಕೆ ಇದೆ ಎಂದು ಹೇಳುವ ಅವರು, ಏಕೆಂದರೆ ಅದು ಸಾಧ್ಯವಿರುವುದನ್ನು ತೋರಿಸಲು ವಾಸ್ತವವನ್ನು ಮೀರಿ ಹೋಗಬಹುದಾಗಿದೆ. “ಯಂತ್ರ-ನಿರ್ಮಿತ ಮನರಂಜನೆಯ ಈ ಯುಗದಲ್ಲಿ ರಂಗಭೂಮಿಯ ಜೀವಂತವಾಗಿರುವ ಸಾವಯವ ಮತ್ತು ಅಧಿಕೃತವಾದ ಅನುಭವವನ್ನು ನೀಡುತ್ತದೆ. ಈ ಕಾರಣದಿಂದಲೇ ನಾನು ಮೊದಲ ಬಾರಿಗೆ ರಂಗಭೂಮಿಯ ಅನುಭವ ಪಡೆದಾಗಿನಿಂದ ಇಲ್ಲಿಯವರೆಗೆ ಅದರೊಂದಿಗೆ ಶಾಶ್ವತವಾಗಿ ಉಳಿದುಕೊಂಡಿದ್ದೇನೆ’’ ಎಂದು ಅವರು ತಮ್ಮ ಸಂದರ್ಶನದ ಅಂತ್ಯದಲ್ಲಿ ಹೇಳಿಕೊಂಡಿದ್ದಾರೆ.

ಈ ಚಾಟ್ ಶೋ `ಸೌತ್ ಸ್ಪೆಷಲ್ ಥಿಯೇಟರ್’ ನ ಭಾಗವಾಗಿದೆ ಮತ್ತು ಭಾರತದ ಸಾಹಿತ್ಯಿಕ ಹಾಗೂ ರಂಗಭೂಮಿಯ ಶ್ರೀಮಂತಿಕೆಯ ಪ್ರಖರತೆಯನ್ನು ಮತ್ತಷ್ಟು ಉಜ್ವಲವಾಗಿ ಬೆಳಗಿಸುವ ಬದ್ಧತೆಯನ್ನು Zee ಥಿಯೇಟರ್ ಹೊಂದಿದೆ.

ಈ `ಥಿಯೇಟರ್ ಟೇಲ್ಸ್’ ಅನ್ನು ಏರ್ಟೆಲ್ ಥಿಯೇಟರ್, ಡಿಶ್ ಟಿವಿ ರಂಗಮಂಚ್ ಆ್ಯಕ್ಟೀವ್ & ಡಿ2ಎಚ್ ರಂಗಮಂಚ್ ಆ್ಯಕ್ಟೀವ್ ನಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ 1:30 ಕ್ಕೆ & ರಾತ್ರಿ 7.30 ಕ್ಕೆ ವೀಕ್ಷಿಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular