ನವ ದೆಹಲಿ : ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಕೇಂದ್ರ ಪದಾಧಿಕಾರಿಗಳ ತಂಡವನ್ನು ಶನಿವಾರ ಪುನಾರಚಿಸಿದ್ದಾರೆ. ಕರ್ನಾಟಕದ ಹಿರಿಯ ನಾಯಕ ಸಿಟಿ ರವಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಡಲಾಗಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಪುನರ್ರಚಿಸಲಾದ ಹೊಸ ತಂಡದಲ್ಲಿ ಕರ್ನಾಟಕದ ಯಾರನ್ನೂ ಸೇರಿಸಿಲ್ಲ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ರವಿ ಅವರು ಮಹಾರಾಷ್ಟ್ರ, ತಮಿಳುನಾಡು ಮತ್ತು ಗೋವಾದಂತಹ ಪ್ರಮುಖ ರಾಜ್ಯಗಳ ಉಸ್ತುವಾರಿ ವಹಿಸಿದ್ದರು. 1987 ರಿಂದ ಆರ್ಎಸ್ಎಸ್ ಸ್ವಯಂಸೇವಕ, ರವಿಯನ್ನು ದಕ್ಷಿಣ ಭಾರತದಲ್ಲಿ ಬಿಜೆಪಿಯ ಕಟ್ಟರ್ ಹಿಂದೂ ಮುಖ ಎಂದು ಪರಿಗಣಿಸಲಾಗಿದೆ. ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಮುಗಿದಿದ್ದು, ಪಕ್ಷಕ್ಕೆ ಇನ್ನೂ ನೂತನ ಅಧ್ಯಕ್ಷರನ್ನು ಘೋಷಣೆ ಮಾಡಬೇಕಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ರವಿ ಅವರು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದರು.


