Thursday, March 12, 2026
Flats for sale
Homeರಾಜ್ಯಹೊಸನಗರ : ಶಾಸಕರಿಂದಲೇ ಗ್ರಾಮಾಭಿವೃದ್ಧಿಗೆ ಅಡ್ಡಗಾಲು ; ಕಿಮ್ಮನೆ ರತ್ನಾಕರ್ ಗಂಭೀರ ಆರೋಪ.ಶಾಸಕ ಆರಗ ಜ್ಞಾನೇಂದ್ರ...

ಹೊಸನಗರ : ಶಾಸಕರಿಂದಲೇ ಗ್ರಾಮಾಭಿವೃದ್ಧಿಗೆ ಅಡ್ಡಗಾಲು ; ಕಿಮ್ಮನೆ ರತ್ನಾಕರ್ ಗಂಭೀರ ಆರೋಪ.ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಫುಲ್ ಗರಂ

ಹೊಸನಗರ: ಕೋಟ್ಯಂತರ ರೂ. ಕಾರ್ಪೋರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿಗೆ ನೆಡುತೋಪು ಕಟಾವು ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಕರಿಮನೆ ಗ್ರಾಮದ ಅಭಿವೃದ್ಧಿಗೆ ಸ್ವತಃ ಶಾಸಕ ಆರಗ ಜ್ಞಾನೇಂದ್ರರವರೆ ಅಡ್ಡಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಪಾದಿಸಿದರು

ಅವರು ಕರಿಮನೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೆ ನಿರ್ಮಾಣ ಮಾಡಿದ್ದ ಅಕೇಶಿಯಾ ನೆಡುತೋಪು ಕಡಿತಲೆ ವಿಷಯದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಅನಗತ್ಯ ವಿವಾದ ಹುಟ್ಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಯೇ ಹಿಂದೆ ಅನುದಾನ ನೀಡಿ ನೆಡುತೋಪು ನಿರ್ಮಿಸಿತ್ತು. ಇಷ್ಟು ವರ್ಷಗಳ ಕಾಲ ನಿರ್ವಹಣೆ ಮಾಡಲಾಗಿತ್ತು. ಇದಕ್ಕೆ ಪೂರಕ ದಾಖಲೆಗಳಿವೆ. ಆದರೆ ಈಗ ಕಡಿತಲೆ ವಿಚಾರವನ್ನು ವಿವಾದವನ್ನಾಗಿ ಮಾಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಹಣ ಸಿಗಬಾರದು, ಇದರಿಂದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರಿಗೆ ಗ್ರಾಮಸ್ಥರಲ್ಲಿ ಅಸಮಧಾನ ಮೂಡಬೇಕು ಎನ್ನುವ ಉದ್ದೇಶದಿಂದ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಲು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.

ವಾಸ್ತವದಲ್ಲಿ 2021ರಲ್ಲಿ ಇವರು ಗೃಹ ಸಚಿವರಾಗಿದ್ದ ವೇಳೆ ಸ್ವತಃ ಇವರೇ ಮರ ಕಡಿತಲೆಗೆ ಅವಕಾಶ ನೀಡುವಂತೆ ಇಲಾಖೆಗೆ ಪತ್ರ ಬರೆದಿದ್ದರು. ಈಗ ಇವರೇ ಇದನ್ನು ವಿರೋಧಿಸ ತೊಡಗಿರುವುದು ಕೇವಲ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ಕೇಸು ದಾಖಲಿಸುವುದಾದರೆ ಶಾಸಕರ ವಿರುದ್ಧವೇ ದಾಖಲು ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ನಿರ್ವಹಣೆ ಮಾಡಿದ ನೆಡುತೋಪು ಕಡಿತಲೆ ಮಾಡಿ ಊರಿನ ಅಭಿವೃದ್ಧಿ ಅನುದಾನ ಬಳಸಿಕೊಳ್ಳಲು, ಕಾನೂನಿನ ಅಡಿಯಲ್ಲಿಯೇ ಅವಕಾಶವಿದೆ. ಕೇಂದ್ರದ ಬಿಜೆಪಿ ಸರಕಾರ ರಾಜ್ಯಕ್ಕೆ ನೀಡಬೇಕಾದ ಲಕ್ಷಾಂತರ ಕೋಟಿ ರೂ. ತೆರಿಗೆ ಸಂಗ್ರಹ ಹಣವನ್ನು ನೀಡಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಯಾವುದೇ ಅನುದಾನ ಹರಿದುಬರುತ್ತಿಲ್ಲ. ಗ್ರಾಮದ ಸಂಪನ್ಮೂಲಗಳ ಬಳಕೆಗೆ ಈ ರೀತಿಯಲ್ಲಿ ಅಡ್ಡಿ ತರುವುದು ಎಷ್ಟು ಸಮಂಜಸ ? ಎಂದು ಅವರು ಪ್ರಶ್ನಿಸಿದರು.

ಒಂದು ವೇಳೆ ಅಧಿಕಾರಿಗಳು ಅಥವಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇ ಆದಲ್ಲಿ ತಾವು ಪಂಚಾಯಿತಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ. ಲಕ್ಷಾಂತರ ಮೌಲ್ಯದ ಹಣವನ್ನು ಲಪಟಾಯಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರ ಮೇಲೆ ಆರೋಪ ಮಾಡಿದ್ದಾರೆ. ಅಷ್ಟು ಅನುಮಾನವಿದ್ದರೇ, ಇವರೇ ಕಡಿತಲೆ ಮಾಡಿ ಹಣವನ್ನು ಪಂಚಾಯಿತಿಗೆ ನೀಡಲಿ ಎಂದು ಸವಾಲು ಹಾಕಿದರು.

ಸೀರೆ ಹಂಚುವುದು ಅಭಿವೃದ್ಧಿಯೇ ?

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಇದರಿಂದ ಬಡವರ ವಿರೋಧಿ ಬಿಜೆಪಿ ಎನ್ನುವುದು ತಿಳಿಯಬಹುದು. ಈಗ ಹಬ್ಬದ ನೆಪದಲ್ಲಿ ತೀರ್ಥಹಳ್ಳಿಯಲ್ಲಿ ಸಾವಿರಾರು ಮಹಿಳೆಯರಿಗೆ ಶಾಸಕರು ಸೀರೆ ಹಂಚಿದ್ದಾರೆ. ಇದು ಅಭಿವೃದ್ದಿ ಕಾರ್ಯವೇ, ಇದಕ್ಕೆ ಹಣ ಎಲ್ಲಿಂದ ಬಂತು ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಗ್ರಾಪಂ ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷ ರಮೇಶ್ ಹಲಸಿನಹಳ್ಳಿ, ಪ್ರಮುಖರಾದ ಕರುಣಾಕರ ಶೆಟ್ಟಿ, ಸತೀಶ್ ಪಟೇಲ್, ಪ್ರಕಾಶ್ ಮಳಲಿ, ನಾಗರತ್ನ ದೇವೇಂದ್ರ ಜಿ.ಎಚ್., ಹರೀಶ್, ಪರ್ವತಪ್ಪಗೌಡ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular