ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಗುಂಡಿ ಅಬ್ಬಿ ಜಲಪಾತಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರವೇಶಿಸದಂತೆ ಕೋಡೂರು ಗ್ರಾಮ ಆಡಳಿತ ನಿರ್ಬಂಧ ವಿಧಿಸಿದೆ.
ಪ್ರಕೃತಿಯ ಸೌಂದರ್ಯವನ್ನೇ ಒಡಲಲ್ಲಿ ಇಟ್ಟುಕೊಂಡಿರುವ ತಾಲೂಕು ಹೊಸನಗರ. ಆದರೆ ಇಲ್ಲಿನ ಕೆಲ ತಾಣಗಳು ಅಪಾಯಕಾರಿಯಾಗಿದ್ದು ಪ್ರಕೃತಿ ಸೌಂದರ್ಯ ಸವಿಯಲು ಬಂದ ಅದೆಷ್ಟೋ ಪ್ರವಾಸಿಗರು ಪ್ರಾಣತೆತ್ತ ಉದಾಹರಣೆಗಳಿವೆ.
ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ವಿವಿಧಡೆಗಳಿಂದ ಪ್ರತಿನಿತ್ಯ ಅಬ್ಬಿ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದು, ಈ ಕಾರಣದಿಂದ ಅಬ್ಬಿ ಜಲಪಾತಕ್ಕೆ ಪ್ರವಾಸಿಗರು ಪ್ರವೇಶಿಸದಂತೆ ಗ್ರಾಮಾಡಳಿತ ನಿರ್ಬಂಧ ವಿಧಿಸಿದೆ.
ಕಳೆದ ಎರಡು ವರ್ಷದ ಹಿಂದೆ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ಇದೆ ಜಲಪಾತದಲ್ಲಿ ನೀರುಪಾಲಾಗಿದ್ದ. ಇದು ಅಪಾಯಕಾರಿ ಜಲಪಾತವಾಗಿದ್ದು ಪ್ರವಾಸಿಗರು ನೀರಿಗಿಳಿದರೆ ಅಪಾಯ ತಪ್ಪಿದ್ದಲ್ಲ. ಕೆಲವರಂತೂ ಸೆಲ್ಫಿ, ಫೋಟೋಗ್ರಫಿಯ ಹುಚ್ಚಾಟ ನಡೆಸಲು ಹೋಗಿ ಪ್ರಾಣ ತೆತ್ತಂತಹ ಘಟನೆಗಳ ಜೊತೆಯಲ್ಲಿ ಮೋಜು ಮಸ್ತಿ ಮಾಡಲು ಹೋದ ಯುವ ಸಮೂಹ ಕಾಲು ಜಾರಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡ ಸಾಕಷ್ಟು ಘಟನೆಗಳು ಇಲ್ಲಿ ನಡೆದಿವೆ . ಈ ಕಾರಣದಿಂದಾಗಿ ಅಬ್ಬಿ ಜಲಪಾತದ ವೀಕ್ಷಣೆಗೆ ಪ್ರವಾಸಿಗರ ಹಾಗೂ ಮೂಜು ಮಸ್ತಿ ಮಾಡುವರ ಪ್ರವೇಶವನ್ನು ನಿಷೇಧಿಸಲಾಗಿದೆ.


