ಹೊಸನಗರ : ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಮೂರಾರ್ಜಿ ಬಿನ್ ಬಸವನಾಯ್ಕ ಎಂಬುವವರಿಗೆ ಸೇರಿದ ಮನೆ ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ಗ್ರಾಮದ ಭೀಮನಕೆರೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಶನಿವಾರ ಸಂಜೆ ಹೊಸನಗರದಿಂದ ಸರಬರಾಜಾದ ಸಿಲಿಂಡರ್ ಅನ್ನು ಭಾನುವಾರ ಬೆಳಗ್ಗೆ 8:30 ರ ಸುಮಾರಿಗೆ ರೆಗ್ಯುಲೇಟರ್’ಗೆ ಸಂಪರ್ಕಿಸುವಾಗ ಅನಿಲ ಸೋರಿಕೆಯಾಗಿದ್ದು ನಂತರ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.
ಇಂಡೇನ್ ಕಂಪನಿಗೆ ಸೇರಿದ ಸಿಲಿಂಡರ್ ಇದಾಗಿದ್ದು ವಿತರಕರು ಅವಧಿ ಮೀರಿದ ಸಿಲಿಂಡರ್ (D 23 ಎಂದು ಸಿಲಿಂಡರ್ ಮೇಲೆ ನಮೂದಾಗಿದೆ) ವಿತರಣೆ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಪೋಟದ ತೀವ್ರತೆಗೆ ಮನೆಯ ಕಿಡಕಿ, ಬಾಗಿಲುಗಳು ಛಿದ್ರಗೊಂಡಿವೆ. ಮನೆ ಮೇಲ್ಛಾವಣಿ ಸಂಪೂರ್ಣ ಸುಟ್ಟು ಹೋಗಿದ್ದು ಮನೆಯೊಳಗೆ ಸಂಗ್ರಹಿಸಿಡಲಾದ ಅಡಿಕೆ, ಧವಸ ಧಾನ್ಯಗಳು, ಟಿವಿ, ರೆಫ್ರಿಜರೇಟರ್ ಮತ್ತು ಇನ್ನಿತರ ವಿದ್ಯುತ್ ಉಪಕರಣಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿ ಲಕ್ಷಾಂತರ ರೂ. ನಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


