ಹೊಸಕೋಟೆ : ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಒಂದೊಂದು ಆಸ್ಪತ್ರೆಯ ಹಣೆಬರಹ ಬಟಾಬಯಲಾಗುತ್ತಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎಸ್‌ಪಿಜಿ ಆಸ್ಪತ್ರೆ ಸೇರಿದಂತೆ ನೆಲಮಂಗಲ, ದೊಡ್ಡಬಳ್ಳಾಪುರ,ಇನ್ನಿತರ ಕಡೆಗಳಲ್ಲಿನ ಆಸ್ಪತ್ರೆಗಳ ಮೇಲೆ ವೈದ್ಯಾಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಹೊಸಕೋಟೆಯ ಎಸ್‌ಜಿಪಿ ಆಸ್ಪತ್ರೆಯಲ್ಲಿ ೧೪ ವಾರಗಳ ಹೆಣ್ಣು ಭ್ರೂಣ ಪತ್ತೆಯಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ಆಸ್ಪತ್ತೆಯಲ್ಲಿ ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಿ ಎಸ್‌ಪಿಜಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ವೈದ್ಯ ಡಾ. ಶ್ರೀನಿವಾಸ್ ಸೇರಿ ೧೫ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಯ ಮಾಲೀಕ ಡಾ. ಶ್ರೀನಿವಾಸ್, ನರ್ಸ್ಗಳಾದ ಅನಿತಾ, ನೇತ್ರಾ, ರೇವತಿ, ರಾಧಿಕಾ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಇವರಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ವೈದ್ಯ ಡಾ. ಶ್ರೀನಿವಾಸ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ.
ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪರೀಕ್ಷೆಗೆ ಹೆಣ್ಣು ಭ್ರೂಣ: ಆಸ್ಪತ್ರೆಯಲ್ಲಿ ಪತ್ತೆಯಾದ ಹೆಣ್ಣು ಭ್ರೂಣವನ್ನು ವೈದ್ಯಾಧಿಕಾರಿಗಳು ಪರೀಕ್ಷೆಗೆ ಬೆಂಗಳೂರಿಗೆ ರವಾನಿಸಿದ್ದಾರೆ. ಗರ್ಭಪಾತ ಮಾಡಿಸಿಕೊಂಡ ಮಹಿಳೆ ಇನ್ನೂ ಪತ್ತೆಯಾಗಿಲ್ಲ.
ಆಸ್ಪತ್ರೆಯ ಸಿಸಿಟಿವಿಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.ಆಕೆಯ ಪತ್ತೆಗೆ ವೈದ್ಯರ ನೆರವಿನೊಂದಿಗೆ ಪೊಲೀಸರು ಹುಡುಕಾಡುತ್ತಿದ್ದಾರೆ.
1500 ಕ್ಕೂ ಅಧಿಕ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಎಸ್‌ಪಿಜಿ ಆಸ್ವತ್ರೆಯಲ್ಲಿ ಹಿಂದಿನಿAದಲೂ ಭ್ರೂಣ ಹತ್ಯೆ ನಡೆಯುತ್ತಿತ್ತು ಎನ್ನುವ ಅನುಮಾನ ಬಂದಿತ್ತು ಆಸ್ಪತ್ರೆಯ ದಾಖಲೆಗಳು ಸಾಕಷ್ಟು ಅನುಮಾನ ಮೂಡಿಸುತಿತ್ತು.ಸ್ಕ್ಯಾನಿಂಗ್ ವಿಭಾಗದಲ್ಲಿ ದೊಡ್ಡ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ 1500 ಕ್ಕೂ ಅಧಿಕ ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 400 ಕ್ಕೂ ಹೆಚ್ಚು ಮಹಿಳೆಯರ ಹೆರಿಗೆ ಮಾಡಲಾಗಿದೆ. ಇವರು ಎಲ್ಲಿ ಹೆರಿಗೆಗೆ ದಾಖಲಾಗಿದ್ದರು ಎಂಬ ಮಾಹಿತಿ ಲಭ್ಯ ಇಲ್ಲ. ಇವರಿಗಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೇರೆಡೆ ಹೆರಿಗೆ ಮಾಡಿಸಿಕೊಂಡಿದ್ದಾಯೋ ಅಥವಾ ಗರ್ಭಪಾತ ಮಾಡಲಾಗಿದೆಯೋ ಎಂಬ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುನೀಲ್ ಕುಮಾರ್ ಹೇಳಿದ್ದಾರೆ.


