ಹುಬ್ಬಳ್ಳಿ : ರಾಜ್ಯದಲ್ಲಿ ಇಂತಹ ಅನಾಚಾರ ನಡೆದರೆ ಮುಂದೊಂದು ದಿನ ಕ್ರಾಂತಿ ಆಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ರಾಜ್ಯಕ್ಕೆ ಭೇಟಿ ನೀಡಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ಹೊಣೆಯಾಗಿದ್ದು ಎಂದ ಅವರು ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾಗಿರುವ ಅವರು ಹುಬ್ಬಳ್ಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು, ರೈತರ ಜಮೀನು, ದೇಗುಲ, ಪಾರಂಪರಿಕ ತಾಣಗಳ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. 10-15 ರೈತರ ನಿಯೋಗ ಮನವಿ ಸಲ್ಲಿಸುವ ನಿರೀಕ್ಷೆ ಇತ್ತು. ಆದರೆ, 70ಕ್ಕೂ ಹೆಚ್ಚು ಅಹವಾಲು ಬಂದಿದೆ ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಇದೆಲ್ಲ ಆಗಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಸೂಚನೆಯಂತೆ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಈಗ ರೈತರಿಗೆ ಕೊಟ್ಟ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಕೈವಾಡ ಇಲ್ಲದೆ ಆಸ್ತಿ ಕಬಳಿಸಲು ಸಾಧ್ಯವಿಲ್ಲ. ಸರ್ಕಾರದ ಸೂಚನೆ ಇಲ್ಲದೆ ಅಧಿಕಾರಿಗಳು ಹೇಗೆ ಕೆಲಸ ಮಾಡ್ತಾರೆ? ಇದು ಅತ್ಯಂತ ಗಂಭೀರವಾದ ವಿಚಾರ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ರೈತರ ಸಮಸ್ಯೆಗಳನ್ನು ಆಲಿಸುವುದಕ್ಕೆಂದೇ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ರೈತರು ದಶಕಗಳ ಕಾಲ ಉಳುಮೆ ಮಾಡಿದ ಜಮೀನುಗಳನ್ನು ವಕ್ಫ್ ಬೋರ್ಡ್ ಏಕಾಏಕಿ ತನ್ನದೆಂದು ಹೇಳುತ್ತಿದೆ. ರೈತರು ತಮ್ಮ ಆಸ್ತಿ ಪತ್ರದ ವಿವರಗಳನ್ನು ತಂದಿದ್ದಾರೆ. ರೈತರ ಹೆಸರಲ್ಲಿರುವ ಭೂ ದಾಖಲೆ ವಿವರ ನೀಡುತ್ತಿದ್ದಾರೆ. ರೈತರ ಅಹವಾಲು ಸ್ವೀಕರಿಸುತ್ತೇನೆ ಎಂದರು.
ಕಳೆದ 60-70 ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂಮಿ ಮೇಲೆ ವಕ್ಫ್ ಬೋರ್ಡ ಹಕ್ಕು ಸಾಧಿಸಲು ಹೊರಟಿದೆ. ಹೀಗಾಗಿ ರೈತರು ಪ್ರತಿಭಟಿಸುತ್ತಿದ್ದಾರೆ. ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದು, ವಿಜಯಪುರ ಜಿಲ್ಲೆಗೂ ಭೇಟಿ ನೀಡುತ್ತಿದ್ದೇನೆ. ಕೇವಲ ರೈತರ ಕೃಷಿ ಭೂಮಿ ಮಾತ್ರವಲ್ಲ, ಪ್ರಾಚ್ಯವಸ್ತು ಇಲಾಖೆಯ ಪಾರಂಪರಿಕ ತಾಣಗಳನ್ನು ಸಹ ವಕ್ಫ್ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಸಹ ಮಾಹಿತಿ ಪಡೆಯಲಿದ್ದೇನೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸತ್ಯಾಸತ್ಯತೆ ತಿಳಿದು ವರದಿ ನೀಡುತ್ತೇನೆ ಎಂದು ಹೇಳಿದರು.