ಹುಬ್ಬಳ್ಳಿ : ನಗರದಲ್ಲಿ ನಿನ್ನೆ ದುರುಳನಿಂದ ಕೊಲೆಯಾದ ಬಾಲಕಿಯ ಮರಣೋತ್ತರ ಪರೀಕ್ಷೆಯನ್ನು ಮುಗಿಸಿ ಇಂದು ಬಾಲಕಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಹುಬ್ಬಳ್ಳಿಯ ಕೆಎಂಸಿಯ ಶವಾಗಾರದಲ್ಲಿ ತಾಲೂಕಾ ದಂಡಾಧಿಕಾರಿ ಆರ್.ಕೆ.ಪಾಟೀಲ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ಮೃತದೇಹವನ್ನು ಆ್ಯಂಬುಲೆನ್ಸ್ನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಂತೆ ಕುಟುAಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಲ ನಿಮಿಷಗಳ ಕಾಲ ಮನೆಯ ಮುಂದೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ನಗರದ ದೇವಾಂಗಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಆರೋಪಿ ಹಿನ್ನೆಲೆ ಮಾಹಿತಿ ಸಂಗ್ರಹ:
ನಿನ್ನೆ ಸ್ಥಳ ಮಹಜರಿಗೆ ಕರೆದೊಯ್ಯುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ರಿತೇಶಕುಮಾರ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿದ್ದು, ವಿಚಾರಣೆ ವೇಳೆ ಆರೋಪಿಯು ಬಿಹಾರದ ಪಾಟ್ನಾ ಮೂಲದವನೆಂದಷ್ಟೇ ಹೇಳಿದ್ದು, ಆತನ ಕುಟುಂಬಸ್ಥರು, ಸ್ನೇಹಿತರು, ಈ ಹಿಂದೆ ಕೆಲಸ ಮಾಡಿಸಿಕೊಂಡ ಮಾಲೀಕರು ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಹುಧಾ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಆರೋಗ್ಯ ಸುಧಾರಣೆ:
ಈ ಮಧ್ಯೆ ನಿನ್ನೆ ಆರೋಪಿಯು ಪರಾರಿಯಾಗಲು ನಡೆಸಿದ್ದ ಹಲ್ಲೆಯಿಂದ ಗಾಯಗೊAಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್‌ಐ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಅಗತ್ಯದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅವರ ಕುಟುಂಬಸ್ಥರು ಬಯಸಿದರೆ ಅವರನ್ನು ಅವರ ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.