ಹುಬ್ಬಳ್ಳಿ : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಸಾಕ್ಷಿ ಗುರುನಾಥಗೌಡ ಅವರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಪೊಲೀಸರು ವಿನಯ್ ಕುಲಕರ್ಣಿ ಪರ ಸಲ್ಲಿಸಿದ್ದ ಬಿ ರಿಪೋರ್ಟ್ ಅವರನ್ನು ಹೈಕೋರ್ಟ್ ತಿರಸ್ಕರಿಸಿದೆ.
ಅಸಮರ್ಪಕ ತನಿಖೆ ನಡೆಸಿದ ಧಾರವಾಡ ಸಬ್ ಅರ್ಬನ್ ಠಾಣೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ತನಿಖೆ ಮುಂದುವರಿಸುವಂತೆ ಸೂಚಿಸಿದೆ. ದೂರುದಾರ ಗುರುನಾಥಗೌಡ ಸಾಕ್ಷ್ಯವಾಗಿ ಸಿಡಿ ನೀಡಿದ್ದರೂ ಪೊಲೀಸರು ಪರಿಗಣಿಸಿಲ್ಲ ಎಂಬುದನ್ನು ಕೋರ್ಟ್ ಬೊಟ್ಟು ಮಾಡಿದೆ.
ಡಿಜಿಟಲ್ ಸಾಕ್ಷ್ಯ ಪರಿಗಣಿಸದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ, ಆರೋಪಿಗಳನ್ನು ತನಿಖೆಗೆ ಒಳಪಡಿಸದೇ ಬೇಜವಾಬ್ದಾರಿ ತೋರಿದ್ದಾರೆ. ತನಿಖೆಗೆ ಸರ್ಕಾರದ ಪೂರ್ವಾನುಮತಿ ಬೇಕೆಂದು ತಪ್ಪು ಮಾಹಿತಿ ನೀಡಲಾಗಿದೆ. ತನಿಖಾಧಿಕಾರಿ ಕಾನೂನು ಅರಿಯಲು ವಿಫಲರಾಗಿದ್ದಾರೆ. ಹೀಗಾಗಿ ಪ್ರಕರಣದ ಮರುತನಿಖೆ ನಡೆಸುವಂತೆ ನ್ಯಾಯಾಧೀಶೆ ಜೆ.ಪ್ರೀತ್ ಆದೇಶ ಹೊರಡಿಸಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಸಾಕ್ಷಿ ನಾಶಗೊಳಿಸುವ ಸಾಧ್ಯತೆ ಹಿನ್ನೆಲೆ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಲಾಗಿದೆ. ಹಲವು ಬಾರಿ ಪ್ರವೇಶ ಕೋರಿ ಕೋರ್ಟ್ಗೆ ಮನವಿ ಸಲ್ಲಿಸಿದ್ದ ಕುಲಕರ್ಣಿಗೆ ಅನುಮತಿ ಸಿಗುತ್ತಲೇ ಇಲ್ಲ. ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದಾಗಲೂ ಷರತ್ತು ಸಡಿಲಿಸಿಲ್ಲ. ಚುನಾವಣೆ ವೇಳೆಯೂ ಕ್ಷೇತ್ರ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ. ಈಗಾಗಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಗುರುತರ ಆರೋಪ ಶಾಸಕ ವಿನಯ್ ಕುಲಕರ್ಣಿ ಮೇಲಿದ್ದು, ಪ್ರಮುಖ ಸಾಕ್ಷಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ.