ಹಾಸನ : ಮಗನ ಕ್ಯಾನ್ಸರ್ ಚಿಕಿತ್ಸೆಗೆಂದು ಮನೆ ಒತ್ತೆ ಇಟ್ಟು ಸಾಲ ಪಡೆದಿದ್ದ ವೃದ್ಧ ದಂಪತಿ ಇದೀಗ ಹೊರದೂಡಲ್ಪಟ್ಟು ಬೀದಿಯಲ್ಲಿ ಹಗಲು ರಾತ್ರಿ ಕಳೆಯುವಂತಾಗಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಕೊರಟಿಕೆರೆ ದಲಿತ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ.
ಕೊರಟಿಕೆರೆ ಗ್ರಾಮದ ನಿವಾಸಿಗಳಾದ ಸಣ್ಣಯ್ಯ ಮತ್ತು ಜಯಮ್ಮ ಎಂಬ ವೃದ್ಧ ದಂಪತಿ, ತಮ್ಮ ಮಗ ಕುಮಾರನಿಗೆ ಕ್ಯಾನ್ಸರ್ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ 2023ರಲ್ಲಿ ಚಿಕಿತ್ಸೆಗಾಗಿ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ವಾಸವಿದ್ದ ಪುರಾತನ ಹಳೆಯ ಮನೆ ಒತ್ತೆ ಇಟ್ಟು 2 ಲಕ್ಷ ರೂ. ಸಾಲ ಪಡೆದಿದ್ದರು. ಒಂದು ವರ್ಷ ಸಾಲದ ಕಂತು ಪಾವತಿಸಿದ ಬಳಿಕ, ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲದ ಕಂತು ಪಾವತಿಸಲು ಸಾಧ್ಯವಾಗದೆ ಹೋಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಹಣ ವಸೂಲಿಗಾಗಿ ಪ್ರತಿದಿನ ಫೈನಾನ್ಸ್
ಸಂಸ್ಥೆಯ ಸಿಬ್ಬಂದಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎAದು ವೃದ್ಧರು ಅಳಲು ತೋಡಿಕೊಂಡಿದ್ದಾರೆ. ಸ್ವಲ್ಪ ಸಮಯ ಕೊಡಿ, ಕೆಲಸ ಮಾಡಿ ಸಾಲ ತೀರಿಸುತ್ತೇವೆ ಎಂದು ಮನವಿ ಮಾಡಿದರೂ, `ಕೋರ್ಟ್ ಆದೇಶವಿದೆ’ ಎಂದು ಹೇಳಿಕೊಂಡು ಫೈನಾನ್ಸ್ ಸಿಬ್ಬಂದಿ ಮನೆಯ ಬಾಗಿಲಿಗೆ ಬೀಗ ಜಡಿದು, ಪಂಚನಾಮೆ ಹಾಕಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ವೃದ್ಧ ದಂಪತಿ ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗದೆ ಬೀದಿಗೆ ತಳ್ಳಲ್ಪಟ್ಟಿದ್ದಾರೆ.
ಖಾಸಗಿ ಹಣಕಾಸು ಸಂಸ್ಥೆಯ ಈ ಅಮಾನವೀಯ ಹಾಗೂ ಕ್ರೂರ ಕ್ರಮಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಾಲೂಕು ಆಡಳಿತ ತಕ್ಷಣ ಮಧ್ಯಪ್ರವೇಶಿಸಿ ವೃದ್ಧ ದಂಪತಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.


