ಹಾಸನ : ಬೇಲೂರು ಪಟ್ಟಣದ ಗಣೇಶ ದೇವಾಲಯದಲ್ಲಿ ಅನಾಮಿಕ ಮಹಿಳೆ ಮುಖಕ್ಕೆ ಕಪ್ಪು ವೇಲ್ ಸುತ್ತಿಕೊಂಡು ಒಳನುಗ್ಗಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು, ಆರೋಪಿ ಪತ್ತೆಗೆ ಪೊಲೀಸರಿಗೆ ಸಹಾಯಕವಾಗಿದೆ.


ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯ ಬಗ್ಗೆ ಪೊಲೀಸರು ಸುಳಿವು ಪತ್ತೆಹಚ್ಚಿದ್ದಾರೆ. ಶೀಘ್ರದಲ್ಲೇ ಬಂಧನವಾಗಲಿದೆ ಎನ್ನಲಾಗುತ್ತಿದೆ.
ಘಟನೆಯ ನಂತರ ಸ್ಥಳಕ್ಕೆ ಶಾಸಕ ಎಚ್.ಕೆ. ಸುರೇಶ್ ಭೇಟಿ ನೀಡಿ ದುಷ್ಕರ್ಮಿಯ ಹೀನ ಕೃತ್ಯವನ್ನು ಖಂಡಿಸಿದ್ದಾರೆ. “ಆರೋಪಿಗಳನ್ನು ಇಂದೇ ಬಂಧಿಸಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ” ಎಂದು ಎಚ್ಚರಿಕೆ ನೀಡಿದ ಅವರು, ಈ ಸಂಬಂಧ ಈಗಾಗಲೇ ಎಸ್ಪಿ ಜೊತೆ ಮಾತನಾಡಿ ತ್ವರಿತ ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದಿದ್ದಾರೆ.
ಘಟನಾ ಸ್ಥಳದ ಎದುರು ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿ, ಆರೋಪಿಯನ್ನು ತಕ್ಷಣ ಪತ್ತೆ ಮಾಡಿ ಸ್ಥಳಕ್ಕೆ ಕರೆತರಬೇಕು ಎಂದು ಆಗ್ರಹಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.