ಹಾಸನ : ಸ್ನೇಹಿತರೆಂದರೆ ಪ್ರಾಣಕ್ಕೆ ಪ್ರಾಣಕೊಡುತ್ತಾರೆ ಆದರೆ ಇಲ್ಲಿ ಸ್ನೇಹಿತರು ಎಣ್ಣೆ ಪಾರ್ಟಿ ಕೊಟ್ಟು ೧೦೦ ಹಣಕೊಡಲಿಲ್ಲವೆಂದು ಜೊತೆಯಲ್ಲಿದ್ದ ಸ್ನೇಹಿತನನ್ನೇ ಕೊಂದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
100 ರೂಪಾಯಿಗಾಗಿ ದುರುಳರು ಸ್ನೇಹಿತನನ್ನೇ ಇರಿದು ಕೊಂದ ಮೃತ ಗಣೇಶ್ (27) ಎಂದು ಗುರುತಿಸಲಾಗಿದೆ.ಸಂಜೆ ಬೇಗನೆ ಕೆಲಸ ಮುಗಿಸಿ ಗೆಳೆಯರ ಜೊತೆ ಒಟ್ಟಿಗೆ ಪಾರ್ಟಿ ಮಾಡಿದ್ದೇ ಗಣೇಶ್ (27) ಜೀವಕ್ಕೆ ಕುತ್ತು ತಂದೊಡ್ಡಿದೆ.ಮದ್ಯಪಾನದ ಅಮಲಿನಲ್ಲಿದ್ದ ದುರುಳರು ಸ್ನೇಹಿತನನ್ನೇ ಇರಿದು ಕೊಲೆ ಮಾಡಿದ್ದು ಯುವಕನನ್ನೇ ನಂಬಿ ಬದುಕುತಿದ್ದ ಕುಟುಂಬ ದಿಕ್ಕು ಇಲ್ಲದಂತಾಗಿದೆ.
ಮೃತ ಗಣೇಶ್ ಗ್ರಾಮ ಪಂಚಾಯ್ತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಾ ಮನೆಗೆ ಆಸರೆಯಾಗಿದ್ದ. ಹೇಳಿ ಕೇಳಿ ಬೆಳಿಗ್ಗೆಯೇ ಕೊಳಾಯಿಗೆ ನೀರು ಬಿಡುವ ಕೆಲಸ ಮುಗಿಯುತ್ತಿದ್ದರಿಂದ ಸಂಜೆಯಾಗುತ್ತಲೇ ಸ್ನೇಹಿತರ ಜೊತೆ ಸೇರುವ ಅಭ್ಯಾಸ ಇರಿಸಿಕೊಂಡಿದ್ದ. ಶುಕ್ರವಾರ ಕೂಡ ಸಂಜೆ ಬೇಗನೆ ಕೆಲಸ ಮುಗಿಸಿ ಗೆಳೆಯರ ಜೊತೆ ಒಟ್ಟಿಗೆ ಪಾರ್ಟಿ ಮಾಡಿದ್ದ. ಪಾರ್ಟಿಯೆಲ್ಲ ಮಗಿದ ಬಳಿಕ ಗಣೇಶ್ನ ಗೆಳೆಯ ರಘು ನೂರು ರೂಪಾಯಿ ಹಣ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ್ದ ಗಣೇಶ್, ‘‘ಪದೇ ಪದೆ ಹಣ ಯಾಕೆ ಕೇಳುತ್ತೀಯಾ? ನನ್ ಹತ್ರ ದುಡ್ಡಿಲ್ಲ ಹೋಗು’’ ಎಂದು ಹೇಳಿದ್ದಕ್ಕೆ ಸಿಟ್ಟಾಗಿದ್ದ ರಘು ತನ್ನ ನಟೋರಿಯಸ್ ಗೆಳೆಯ ಮಧು ಎಂಬುವವನಿಗೆ ವಿಚಾರ ತಿಳಿಸಿದ್ದ. ಮೊದಲೇ ಕುಡಿದ ಅಮಲಿನಲ್ಲಿದ್ದ ಮಧು ಏಕಾಏಕಿ ಗಣೇಶ್ ಮೇಲೆ ಎಗರಿಬಿದ್ದಿದ್ದಾನೆ. ನನ್ನ ದೋಸ್ತನಿಗೆ ಹಣ ಕೊಡುವುದಿಲ್ಲ ಎನ್ನುತ್ತೀಯಾ ಎಂದು ಹಲ್ಲೆ ಮಾಡಲು ಮುಂದಾಗಿದ್ದಾನೆ. ಗಣೇಶ್ ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಬಿಡದೆ ಹಿಂಬಾಲಿಸಿ ಬಂದ ಪಾಪಿಗಳು ಇರಿದು ಕೊಂದು ಪರಾರಿಯಾಗಿದ್ದಾರೆ.
ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಹಾಸನ ಎಸ್ಪಿ ಮೊಹಮದ್ ಸುಜೀತಾ ತಿಳಿಸಿದ್ದಾರೆ.ಇದೀಗ ಮನೆ ಮಗನನ್ನು ಕಳೆದುಕೊಂಡ ಹೆತ್ತವರ ರೋದನ ಮುಗಿಲು ಮುಟ್ಟಿದ್ದು ಆರೋಪಿಗಳನ್ನ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ


