ಹಾವೇರಿ : ಒಣ ಮೆಣಸಿನಕಾಯಿ ದರವನ್ನು ಹಠಾತ್ತನೆ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಟೆಂಡರ್‌ಗೆ ಇಟ್ಟಿದ್ದ ಸಾವಿರಾರು ರೈತರು ಆಕ್ರೋಶಗೊಂಡು ಉಗ್ರ ಪ್ರತಿಭಟನೆ ಮಾಡಿದ ಘಟನೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಎಪಿಎಂಸಿ ವಾಹನ, ಮತ್ತಿತರ ಸಾಮಗ್ರಿಗಳಿಗೆ ರೈತರು ಬೆಂಕಿ ಹಚ್ಚಿದ ಪರಿಣಾಮ ಎಪಿಎಂಸಿ ಆವರಣ ಧಗಧಗ ಉರಿಯುವಂತೆ ಗೋಚರಿಸಿತು.ಅಗ್ನಿಶಾಮಕ ವಾಹನಕ್ಕೇ ಬೆಂಕಿ: ದರ ಕುಸಿತದ ದರಪಟ್ಟಿ ಬರುತ್ತಿದ್ದಂತೆ ಸಿಟ್ಟಿಗೆದ್ದ ಸಾವಿರಕ್ಕೂ ಹೆಚ್ಚು ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಮುತ್ತಿಗೆ ಹಾಕಿ ಕಂಪ್ಯೂಟರ್,ವಿವಿಧ ಸಾಮಗ್ರಿಗಳನ್ನು ಒಡೆದು ಹಾಕಿದರು. ಕಚೇರಿ ವಾಹನ ಫೈರ್ ಎಂಜಿನ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹಠಾತ್ತನೆ ನುಗ್ಗಿದ ರೈತರು ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಸಹ ಹೊಡೆದು ಓಡಿಸಿದರು. ಕ್ಷಣಾರ್ಧದಲ್ಲಿ ನಡೆದ ಘಟನೆಗೆ ಮಾರುಕಟ್ಟೆಯಲ್ಲಿ ವರ್ತಕರು, ದಲಾಲರು, ಕೂಲಿ ಕಾರ್ಮಿಕರು ಬೆಚ್ಚಿಬಿದ್ದರು. ರೈತರು ಕೈಗೆ ಸಿಕ್ಕ ಕಲ್ಲು ಬಡಿಗೆಗಳಿಂದ ವಾಹನ ಹಾಗೂ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.
ಸಾವಿರಾರು ರೈತರು ಪ್ರತಿಭಟನೆಗಿಳಿದ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟಿದ್ದ ಪೊಲೀಸರು ದಿಕ್ಕು ತೋಚದಂತಾದರು. ಬೆAಕಿ ನಂದಿಸಲು ಆಗಮಿಸಿದ ಅಗ್ನಿಶಾಮಕ ವಾಹನಕ್ಕೇ ಬೆಂಕಿ ಹಚ್ಚಿದ್ದರಿಂದ ಮತ್ತಷ್ಟು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಅಧಿಕಾರಿಗಳು ರೈತರ ಜೊತೆ ಸಂಧಾನಕ್ಕೆ ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಪೊಲೀಸರೆದುರೇ ವಾಹನಗಳಿಗೆ ಬೆಂಕಿ: ಪ್ರತಿಭಟನೆ ಹಿಂಸಾರೂಪ ಪಡೆಯಿತು, ಕಚೇರಿ ಆವರಣದಲ್ಲಿ ನಿಲ್ಲಿಸಿದ ಸ್ಕಾರ್ಪಿಯೋ ವಾಹನ, ಸಿಬ್ಬಂದಿ ಕಾರುಗಳನ್ನು ಪುಡಿಪುಡಿ ಮಾಡಿದ ರೈತರು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಪೊಲೀಸರ ಹಾಗೂ ಎಪಿಎಂಸಿ ಅಧಿಕಾರಿಗಳ ಎದುರಲ್ಲೇ ವಾಹನಗಳು ಸುಟ್ಟು ಬೂದಿಯಾದವು.
ಬೆಂಕಿ ಆರಿಸಲು ಬಂದ ಅಗ್ನಿಶಾಮಕ ದಳ ಸಿಬ್ಬಂದಿಯನ್ನೂ ಬಿಡದೆ ರೈತರು ಅಟ್ಟಾಡಿಸಿಕೊಂಡು ಹೊಡೆದರು. ವಾಹನಕ್ಕೂ ಬೆಂಕಿ ಹಚ್ಚಿದರು. ಪರಿಸ್ಥಿತಿ ಕೈಮೀರಿದ್ದರಿಂದ ಲಾಠಿ ಚಾರ್ಜ್ ಮಾಡಲು ಬಂದ ಪೊಲೀಸರನ್ನು ಕೂಡ ಬೆನ್ನುಹತ್ತಿ ಕಲ್ಲು ಬಡಿಗೆಗಳಿಂದ ಹೊಡೆದರು. ದಾವಣಗೆರೆ ಐಜಿಪಿ ಹಾಗೂ ಎಸ್‌ಪಿ ಡಿವೈಎಸ್‌ಪಿ, ಹುಬ್ಬಳ್ಳಿ ಧಾರವಾಡದ ಎಸ್‌ಪಿ ಹಾಗೂ ಡಿವೈಎಸ್‌ಪಿ, ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರು, ಡಿಆರ್ ಹಾಗೂ ಕೆಸ್‌ಆರ್‌ಪಿ ವಾಹನಗಳು ಆಗಮಿಸಿವೆ.