ಹಾವೇರಿ : ಆಟ ಆಡುವಾಗ ಬಿದ್ದು ಕೆನ್ನೆಯ ಭಾಗದಲ್ಲಿ ಗಾಯ ಮಾಡಿಕೊಂಡು ಬಂದಿದ್ದ ಬಾಲಕನಿಗೆ ಪ್ರಾಥಮಿಕ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೊಲಿಗೆ ಹಾಕದೇ ಫೆವಿಕ್ವಿಕ್ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಹಾನಗಲ್ಲ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಜ.14 ರಂದು ಈ ಘಟನೆ ನಡೆದಿದೆ. ಗುರುಕಿಶನ್ ಅಣ್ಣಪ್ಪ ಹೊಸಮನಿ (೭) ಎಂಬ ಬಾಲಕ ಆಟ ಆಡುವಾಗ ಬಿದ್ದು ಕೆನ್ನೆ ಮೇಲೆ ಗಾಯವಾಗಿ ರಕ್ತ ಸುರಿಯುತ್ತಿತ್ತು. ಕೂಡಲೇ ಪಾಲಕರು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ದಿದ್ದರು. ನರ್ಸ್ ಜ್ಯೋತಿ ಎಂಬುವವರು ಬಾಲಕನ ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡುವುದನ್ನು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ಚಿಕಿತ್ಸೆ ನೀಡಿದ್ದರು.
ಇತ್ತ ಫೆವಿಕ್ವಿಕ್ ಯಾಕೆ ಹಾಕಿದ್ರಿ ಅಂತ ಕೇಳಿದರೆ ಸ್ಟಿಚ್(ಹೊಲಿಗೆ) ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗ್ತಾ ಇತ್ತು. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ಬಗ್ಗೆ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿರುವ ಬಾಲಕನ ಪೋಷಕರು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವರದಿ ಪಡೆದ ಡಿಎಚ್‌ಒ ರಾಜೇಶ್ ಸುರಗಿಹಳ್ಳಿ ಅವರು ನರ್ಸ್ ಜ್ಯೋತಿ ಅವರನ್ನು ಗುತ್ತಲ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿದ್ದಾರೆ.
ಗಾಯಕ್ಕೆ ಫೆವಿಕ್ವಿಕ್ ಹಾಕುವುದು ತಪ್ಪು ವಿಧಾನ. ಆಡೂರು ಪಿಎಚ್‌ಸಿ ನರ್ಸ್ ಈ ರೀತಿ ಮಾಡಿರುವುದು ವಿಡಿಯೋ ನೋಡಿದ ಮೇಲೆ ಗೊತ್ತಾಗಿದೆ. ಸಂಬAಧಪಟ್ಟ ನರ್ಸ್ಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.