ಹಾನಗಲ್ಲ : ಸತತ ಮಳೆಯಿಂದ ಬೆಳೆ ಬಾರದೇ, ಸಕಾಲದಲ್ಲಿ ಸಾಲ ತೀರಿಸಲು ಸಾಧ್ಯವಾಗಲಿಲ್ಲ ಎಂದು ನೇಣು ಬಿಗಿದುಕೊಂಡು ರೈತನೋರ್ವ ಸಾವಿಗೆ ಶರಣಾದ ಘಟನೆ ತಾಲೂಕಿನ ಕ್ಯಾಸನೂರ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಹುಲ್ಲಪ್ಪ ಸಿದ್ದಪ್ಪ ಮೂಡೂರ(೫೦) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಚಿಕ್ಕಾಂಶಿ ಹೊಸೂರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 1.50 ಲಕ್ಷರೂ, ಹಾಗೂ ಸ್ಥಳೀಯ ಧರ್ಮಸ್ಥಳ ಸಂಘದಲ್ಲಿಯೂ ಕೈಗಡ ಸಾಲ ಮಾಡಿಕೊಂಡಿದ್ದನೆನ್ನಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಹೊಲದಲ್ಲಿ ಸರಿಯಾಗಿ ಬೆಳೆ ಬಂದಿರಲಿಲ್ಲ. ಹೀಗಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ಗ್ರಾಮದ ಹೊರಭಾಗದ ಕೆಂಗನಕಟ್ಟಿ ಕೆರೆಯ ದಂಡೆಯಲ್ಲಿ ಗಿಡವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


