ಸುರಪುರ : ಯಾದಗಿರಿ ಜಿಲ್ಲೆಗೂ ಪಡಿತರ ಅಕ್ಕಿ ಅಕ್ರಮ ಸಾಗಾಟಕ್ಕೂ ಬಿಡಲಾರದ ನಂಟು ಎನ್ನುವಂತಾಗಿದೆ. ಶಹಾಪುರ ಟಿಎಪಿಸಿಎಂಎಸ್ ಗೋದಾಮಿನಿಂದ 6000 ಕ್ವಿಂಟಲ್ ಅಕ್ಕಿ ಕಳ್ಳತನವಾಗಿರುವ ಘಟನೆ ರಾಜ್ಯದ ಗಮನ ಸೆಳೆದಿತ್ತು. ಈ ಪ್ರಕರಣದಲ್ಲಿ ಅನೇಕ ಅಧಿಕಾರಿಗಳು ತಲೆದಂಡವಾಗಿ ಬಂಧನವೂ ಕೂಡ ನಡೆದಿತ್ತು. ಆದರೂ ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ಸಾಗಾಟ ನಿಂತಿಲ್ಲ ಎನ್ನುವ ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ನೀಡುವಂತೆ ಸುರಪುರದಲ್ಲೂ ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಸುರಪುರ ಠಾಣೆ ಬಿ ಐ ಆನಂದ ವಾಗಮೊಡೆ ಅವರ ಸಿಬ್ಬಂದಿಗಳೊಂದಿಗೆ ಖಚಿತ ಮಾಹಿತಿ ಮೇರೆಗೆ ಸುರಪುರ ನಗರದ ಕುಂಬಾರಪೇಟೆ ಬಳಿಯಲ್ಲಿ ನಿಂತು ಅಕ್ಕಿ ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ವಾಹನಕ್ಕೆ ನಿಲ್ಲಿಸಲು ತಿಳಿಸಿದಾಗ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ವಾಹನವನ್ನು ಪರಿಶೀಲನೆ ಮಾಡಿದಾಗ 45 ಚೀಲ ಅಕ್ಕಿ ಇರುವುದು ಕಂಡುಬಂದು ಗೂಡ್ಸ್ ವಾಹನವನ್ನು ಅಕ್ಕಿ ಸಮೇತ ಪೊಲೀಸ್ ಠಾಣೆಗೆ ತರಲಾಗಿದೆ.
ಸುರಪುರ ನಗರದ ರಂಗಂಪೇಟೆಯಿಂದ ಲಿಂಗಸುಗೂರು ತಾಲೂಕಿನ ಗುರುಗುಂಟ ಗ್ರಾಮಕ್ಕೆ ಅಕ್ಕಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಲಾಗಿದೆ ವಾಹನದ ಚಾಲಕ ನಂದೀಶ ಎಂದು ಗೊತ್ತಾಗಿದ್ದು ಮಾಲೀಕ ಯಾರು ಎನ್ನುವುದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸುರಪುರ ಠಾಣೆಯಲ್ಲಿ ಈ ಕುರಿತು ಪ್ರಕರಣವು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆನಂದ ವಾಗಮೊಡೆ ತಿಳಿಸಿದ್ದಾರೆ.


