ಸುರತ್ಕಲ್ : ಇಲ್ಲಿಗೆ ಸಮೀಪದ ಸುಭಾಷಿತ ನಗರ ದಿನ ಕಳೆದಂತೆ ಕೊಳಗೇರಿಗಿಂತಲೂ ಕಡೆಯಾಗುತ್ತಿದೆ. ಇದಕ್ಕೆ ಕಾರಣ ಹತ್ತಿರದ ಹೋಟೆಲ್, ಅಪಾರ್ಟ್ಮೆಂಟ್ ಗಳಿಂದ ಹರಿದು ತೋಡು ಸೇರುತ್ತಿರುವ ತ್ಯಾಜ್ಯ ನೀರು. ಈ ಬಗ್ಗೆ ಸಂಬಂಧಪಟ್ಟ ಮಹಾನಗರ ಪಾಲಿಕೆ, ಸ್ಥಳೀಯ ಕಾರ್ಪೋರೇಟರ್ ಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಅನ್ನುವುದು ಇಲ್ಲಿನ ನಿವಾಸಿಗಳ ದೂರು.
ಸುಭಾಷಿತ ನಗರದಲ್ಲಿ ಅಪಾರ್ಟ್ಮೆಂಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿನ ಒಂದನೇ ಬ್ಲಾಕ್ ಗೆ ಪರಿಸರದ ಹೋಟೆಲ್ ನಿಂದ ತ್ಯಾಜ್ಯ ನೀರು ಹರಿದು ಬರುತ್ತಿದ್ದು ವಾಸನೆಯಿಂದ ಮೂಗು ಮುಚ್ಚಿಕೊಂಡು ದಿನ ಸಾಗಿಸುವಂತಾಗಿದೆ. ಮಳೆ ನೀರು ಹರಿಯುವ ತೋಡಿನಲ್ಲಿ ತ್ಯಾಜ್ಯ ಹರಿಯುತ್ತಿದ್ದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ. ಇದರಿಂದ ಮಲೇರಿಯಾ, ಡೆಂಗ್ಯೂ ನಂತಹ ಮಾರಣಾಂತಿಕ ಕಾಯಿಲೆ ಹರಡುವ ದಿನ ದೂರವಿಲ್ಲ.
ಆದೇ ರೀತಿ ಇಲ್ಲಿನ ಏಳನೇ ಬ್ಲಾಕ್ ನಲ್ಲೂ ಸಮಸ್ಯೆ ಉದ್ಭವವಾಗಿದ್ದು ಅಪಾರ್ಟ್ಮೆಂಟ್ ಗಳ ತ್ಯಾಜ್ಯ ತೋಡು ಸೇರುತ್ತಿದೆ. ಈಗಾಗಲೇ ಇಲ್ಲಿನ ಸುಭಾಷಿತ ನಗರ ರೆಸಿಡೆಂಟ್ಸ್ ಅಸೋಸಿಯೇಷನ್ ಸಂಬಂಧಪಟ್ಟ ಇಲಾಖೆ, ಎರಡನೇ ವಾರ್ಡ್ ಕಾರ್ಪೋರೇಟರ್ ಅವರಿಗೆ ಸಮಸ್ಯೆ ವಿವರಿಸಿದ್ದಾರೆ. ಆದರೆ ತ್ಯಾಜ್ಯ ನೀರು ಹರಿಯುವ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆಯೇ ಹೊರತು ಕಡಿಮೆಯಾಗಿಲ್ಲ. ಕೂಡಲೇ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಅನ್ನುವುದು ಜನರ ಮಾತಾಗಿದೆ.