Friday, November 22, 2024
Flats for sale
Homeಜಿಲ್ಲೆಸುಬ್ರಹ್ಮಣ್ಯ ; ಅಪ್ಪನಿಗೆ ಮಕ್ಕಳ ಟಾರ್ಚರ್ , ಮನೆ ಬಿಟ್ಟು ದೇವರನ್ನು ಹುಡುಕಿ ಕುಕ್ಕೆ ಸುಬ್ರಹ್ಮಣ್ಯ...

ಸುಬ್ರಹ್ಮಣ್ಯ ; ಅಪ್ಪನಿಗೆ ಮಕ್ಕಳ ಟಾರ್ಚರ್ , ಮನೆ ಬಿಟ್ಟು ದೇವರನ್ನು ಹುಡುಕಿ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದ ವೃದ್ಧ ತಂದೆ..!

ಸುಬ್ರಹ್ಮಣ್ಯ ; ವಯಸ್ಸಿನ ಕಾರಣ ಆ ದೇಹದಲ್ಲಿ ನಡೆಯುವ ಶಕ್ತಿ ಉಡುಗಿ ಹೋಗಿದೆಯಾದ್ರೂ ಮನಸಿಗಾದ ನೋವು ಆ ದೇಹವನ್ನು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯದ ವರೆಗೂ ಕರೆತಂದಿದೆ. ನೋಡಲು ಅನುಕೂಲಸ್ಥರಂತೆ ಕಾಣ್ತಾ ಇದ್ದ ಆ ವೃದ್ಧ ಕಳೆದ ಎಂಟು ದಿನದಿಂದ ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಅದೇನೋ ಪ್ರಾರ್ಥನೆ ಮಾಡಿ ಅಲ್ಲೇ ಪ್ರಸಾದ ಸೇವಿಸಿ ಎಲ್ಲೋ ಮೂಲೆಯಲ್ಲಿ ಮಲಗುತ್ತಿದ್ದರು. ಸಾಮಾನ್ಯವಾಗಿ ಬರೋ ಭಕ್ತರು ಒಂದೆರಡು ದಿನ ಇರ್ತಾರಾದ್ರೂ ಇಷ್ಟೊಂದು ದಿನ ಇರೋ ಈ ವೃದ್ಧನನ್ನು ಸ್ಥಳಿಯರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಆವಾಗಲೇ ಈ ಮುದಿ ಜೀವ ಸುಬ್ರಹ್ಮಣ್ಯಕ್ಕೆ ಬಂದ ಕಥೆ ಬಿಚ್ಚಿಕೊಂಡಿದ್ದು.

1965 ರಿಂದ 1969 ರ ವರೆಗೆ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರ ಹೆಸರು ಭಕ್ತವತ್ಸಲ. 81 ವರ್ಷ ವಯಸ್ಸಿನ ಇವರು ಮೂಲತಃ ಬೆಂಗಳೂರಿನವರಾದ್ರೂ ಕಳೆದ ಎಂಟು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆವರಣವನ್ನೇ ಮನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಎಲ್ಲರೂ ಇದ್ದೂ ಎಲ್ಲವನ್ನೂ ಕಳೆದುಕೊಂಡಿದ್ದು ಅನ್ನೋದು ಭಕ್ತವತ್ಸಲ ಅವರ ನೋವಿನ ಮಾತುಗಳು. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಸ್ವಂತ ಮನೆ , ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಜೊತೆ ಸಂತಸದ ಜೀವನ ಕಳೆದಿದ್ದವರು . ಆದರೆ ಕಳೆದ ವರ್ಷ ಇವರ ಪತ್ನಿ ಇಹಲೋಕ ತ್ಯಜಿಸಿದ ಬಳಿಕ ಮಕ್ಕಳು ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಹಾಗೇ ಆಸ್ತಿ ಬರೆಸಿಕೊಂಡ ಮೇಲೆ ಮದುವೆಯಾಗಿರೋ ಮಕ್ಕಳು ಹೆಂಡತಿ ಮಾತು ಕೇಳಿ ತಂದೆಯನ್ನೇ ಹೊರ ಹಾಕಿದ್ದಾರೆ. ಅದ್ರಲ್ಲೂ ಎರಡನೇ ಮಗನ ಹೆಂಡತಿ ಟಾರ್ಚರ್ ತಡೆಯೋದಿಕ್ಕೆ ಆಗದೆ ಮನೆ ಬಿಟ್ಟು ಬಂದಿದ್ದೇನೆ ಅಂತಿದ್ದಾರೆ ಭಕ್ತವತ್ಸಲ.

ಒಬ್ಬ ಮಗ ಪೌರೋಹಿತ್ಯ ಮಾಡಿಕೊಂಡಿದ್ದಾನೆ ಹಾಗೂ ಎರಡನೇ ಮಗ ಡ್ರೈವರ್ ಕೆಲಸ ಮಾಡ್ತಾ ಇದ್ದಾನಂತೆ. ಆದ್ರೆ ತಂದೆಯ ಆಸ್ತಿಯ ಪಾಲು ಪಡೆದ ಮೇಲೆ ಇಬ್ಬರಿಗೂ ತಂದೆ ಬೇಡವಾಗಿದ್ದಾರೆ. ಮನೆಗೆ ಹೋಗೋದಿಲ್ಲ ಸತ್ರೆ ಇಲ್ಲೇ ಸಾಯ್ತೆನೆ ಎಂದು ಹೇಳ್ತಾ ಇದ್ದಾರೆ ಈ ಅಜ್ಜ.

ಎಂಟು ದಿನಗಳಿಂದ ಸುಬ್ರಹ್ಮಣ್ಯ ದೇವಸ್ಥಾನದ ಅಕ್ಕಪಕ್ಕದಲ್ಲೇ ಇದ್ದ ಭಕ್ತವತ್ಸಲ ಅವರನ್ನ ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಬಂದ ಠಾಣಾಧಿಕಾರಿ ಮಂಜುನಾಥ್ ಹಾಗೂ ಸ್ಥಳಿಯ ಸಾಮಾಜಿಕ ಟ್ರಸ್ಟ್​ನ ರವಿ ಕುಕ್ಕೆ ಭಕ್ತವತ್ಸಲ ಅವರ ರಕ್ಷಣೆ ಮಾಡಿದ್ದಾರೆ. ಅವರನ್ನು ಟ್ರಸ್ಟ್​ ಕಚೇರಿಗೆ ಕರೆದೊಯ್ದು ಸಾಂತ್ವನ ಹೇಳಿ ಬಳಿಕ ವಿಚಾರಿಸಿದಾಗ ಎಲ್ಲಾ ಕಥೆಯನ್ನು ಭಕ್ತವತ್ಸಲ ಹೇಳಿಕೊಂಡಿದ್ದಾರೆ. ಮನೆಯಲ್ಲಿ ಮಕ್ಕಳು ಎಲ್ಲದಕ್ಕೂ ವಿರೋಧ ಮಾಡ್ತಾರೆ.. ಅವರು ಹೇಳಿದಂತೆ ಕೇಳದೇ ಇದ್ದರೆ ನನಗೆ ತೊಂದರೆ ಮಾಡ್ತಾರೆ ಅಂತ ದೂರಿದ್ದಾರೆ. ಇನ್ನು ಮಕ್ಕಳಿಗೆ ಫೋನ್​ ಮಾಡಿ ವಿಚಾರಿಸಿದ್ರೆ ಮಕ್ಕಳಿಗೆ ತಂದೆ ಎಲ್ಲಿ ಹೋಗಿದ್ದಾರೆ ಅನ್ನೋದೇ ಗೊತ್ತಿಲ್ಲ. ತಂದೆ ಕಾಣೆಯಾಗಿದ್ದಾರೆ ಅನ್ನೋ ಬಗ್ಗೆ ಒಂದು ದೂರು ಕೂಡಾ ದಾಖಲಿಸಿಲ್ಲ. ಆದ್ರೂ ಮಕ್ಕಳ ಜೊತೆ ಕಳುಹಿಸಿ ಕೊಡ್ತೇವೆ ಅಂತ ಹೇಳಿದ್ರೆ , ಸತ್ತರೆ ಇಲ್ಲೇ ಸಾಯೋದು ಮನೆಗಂತೂ ವಾಪಾಸ್ ಹೋಗೋದಿಲ್ಲ ಅಂತ ಹಟ ಹಿಡಿದು ಕುಳಿತಿದ್ದಾರೆ.

ಸಮಾಜ ಸೇವಕ ರವಿ ಆಶ್ರಯದಲ್ಲಿ ಭಕ್ತವತ್ಸಲ.
ಕುಕ್ಕೆ ಸುಬ್ರಹ್ಮಣದಲ್ಲಿ ಸಮಾಜ ಸೇವಾ ಟ್ರಸ್ಟ್​ ನಡೆಸ್ತಾ ಇರೋ ರವಿ ಕಕ್ಕೆ ಪದವರು ಎಂಬವರ ಬಳಿ ಭಕ್ತವತ್ಸಲ ಈಗ ಸುರಕ್ಷಿತವಾಗಿದ್ದಾರೆ. ಹಾಗಂತ ಅವರನ್ನು ಹೆಚ್ಚು ದಿನ ಇಟ್ಟುಕೊಳ್ಳೋದು ಕೂಡಾ ಇವರಿಗೆ ಕಷ್ಟದ ಕೆಲಸ . ಹೀಗಾಗಿ ಭಕ್ತ ವತ್ಸಲ ಅವರಿಗೆ ತಿಳಿಸದೇ ಅವರ ಇಬ್ಬರೂ ಮಕ್ಕಳನ್ನು ಸುಬ್ರಹ್ಮಣ್ಯಕ್ಕೆ ಕರೆಯಿಸಿದ್ದಾರೆ. ಮಕ್ಕಳಿಗೆ ಒಂದಷ್ಟು ಬುದ್ಧಿ ಹೇಳಿ ಭಕ್ತ ವತ್ಸಲ ಅವರನ್ನು ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ. ಈಗಾಗಲೆ ಮಕ್ಕಳಿಗೆ ಕರೆ ಮಾಡಿದ್ದು ಮಕ್ಕಳೂ ತಂದೆಯನ್ನು ಕರೆದುಕೊಂಡು ಹೋಗಲು ಸುಬ್ರಹ್ಮಣ್ಯಕ್ಕೆ ಬರ್ತಾ ಇದ್ದಾರೆ.

ವಯಸ್ಸಾಗಿರೋ ಭಕ್ತವತ್ಸಲ ಅವರಿಗೆ ನಿಜವಾಗಿಯೂ ಮಕ್ಕಳು ಕಷ್ಟ ನೀಡಿದ್ದಾರಾ ? ಅಥವಾ ವಯಸ್ಸಿನ ಕಾರಣದಿಂದ ಮಕ್ಕಳು ಹೇಳುವ ಕೆಲವೊಂದು ವಿಚಾರಗಳು ಅವರಿಗೆ ಕಷ್ಟವಾಗಿ ಕಂಡಿದೆಯಾ ? ಇದೆಲ್ಲದಕ್ಕೂ ಮಕ್ಕಳು ಬಂದ ಬಳಿಕ ಉತ್ತರ ಸಿಗಬೇಕಷ್ಟೆ. ಆದರೆ ಎಂಟು ದಿನದಿಂದ ತಂದೆ ಕಾಣಿಸುತ್ತಿಲ್ಲಾ ಅಂದಾಗಲೂ ಪೊಲೀಸರಿಗೆ ದೂರು ನೀಡದ ಮಕ್ಕಳ ನಡೆಯ ಬಗ್ಗೆ ಅನುಮಾನ ಹುಟ್ಟಿಸಿದೆ. ಏನೇ ಆಗಲಿ ಈ ವಯಸ್ಸಿನಲ್ಲಿ ದೇವರೇ ದಿಕ್ಕು ಎಂದು ಬಂದ ಭಕ್ತವತ್ಸಲ ಅವರಿಗೆ ದೇವರೇ ದಾರಿ ಕಾಣಿಸಿರಬೇಕು. ಸಾವಿರಾರು ಜನ ಬರೋ ಜಾಗದಲ್ಲಿ ಯಾರೂ ಯಾರನ್ನೂ ಗಮನಿಸೋದಿಲ್ಲ ಅಂತಹದ್ರಲ್ಲಿ ಯಾರೊ ಇವರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಸದ್ಯ ಮತ್ತೆ ಮನೆ ಸೇರುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular