ಡಿಸೆಂಬರ್ 4ರಿಂದ ಬಾಂಗ್ಲಾದೇಶ (IND vs BAN 2022) ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯ ನಂತರ ಮುಂದಿನ ವರ್ಷ ಜನವರಿಯಲ್ಲಿ ಟೀಂ ಇಂಡಿಯಾ (Team India) ಶ್ರೀಲಂಕಾಕ್ಕೆ 3 ಟಿ20 ಸರಣಿಗೆ ಆತಿಥ್ಯ ವಹಿಸಲಿದೆ. ಈ ಸರಣಿಗೆ ಇನ್ನೂ ಟೀಂ ಇಂಡಿಯಾ ಆಯ್ಕೆಯಾಗಿಲ್ಲ. ಆದರೆ, ಬಿಸಿಸಿಐ (BCCI) ಮೂಲಗಳ ಪ್ರಕಾರ, ಶ್ರೀಲಂಕಾ ವಿರುದ್ಧದ ಈ ಸರಣಿಗೆ ಆಯ್ಕೆಯಾದ ತಂಡದಲ್ಲಿ ಟೀಂ ಇಂಡಿಯಾದ ತ್ರಿಮೂರ್ತಿಗಳಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಮತ್ತು ಕೆಎಲ್ ರಾಹುಲ್ (KL Rahul) ಇರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಅದರಲ್ಲಿಯೂ ಕೊಹ್ಲಿ-ರೋಹಿತ್ಗೆ ವಿಶ್ರಾಂತಿ ನೀಡಿದರೆ, ರಾಹುಲ್ ಮದುವೆ ಕಾರಣದಿಂದ ಈಗಾಗಲೇ ಬಿಸಿಸಿಐ ಬಳಿ ರಜೆ ಕೇಳಿರುವುದಾಗಿ ತಿಳಿದುಬಂದಿದೆ. ಇವರಲ್ಲದೆ ಹಿರಿಯ ಆಟಗಾರರಾದ ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿ ಕೂಡ ಈ ಸರಣಿಯ ಭಾಗವಾಗುವುದಿಲ್ಲ ಎನ್ನಲಾಗಿದೆ.
ಬಿಸಿಸಿಐನ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಇನ್ಸೈಡ್‌ಸ್ಪೋರ್ಟ್ ಡಿಸೆಂಬರ್‌ನಲ್ಲಿ ಹೊಸ ಆಯ್ಕೆ ಸಮಿತಿಯನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಆದರೆ, ಇದೀಗ ಕೆಲವು ಅನುಭವಿ ಆಟಗಾರರಿಲ್ಲದೆ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಮುನ್ನಡೆಯುವುದು ಖಚಿತವಾಗಿದೆ. ಈ ಬಗ್ಗೆ ಈಗಾಗಲೇ ರೋಹಿತ್, ವಿರಾಟ್ ಗೆ ಹೇಳಲಾಗಿದೆ. ಅವರೊಂದಿಗೆ ಮಾತುಕತೆ ಸಹ ನಡೆದಿದೆಯಂತೆ. ಹೀಗಿರುವಾಗ ನಾಯಕ ಯಾರು ಎಂಬುದೇ ಪ್ರಶ್ನೆಗೆ ಕೇವಲ ಹಾರ್ದಿಕ್ ಪಾಂಡ್ಯ ಎಂಬುದೇ ಉತ್ತರ ಕೇಳಿಬರುತ್ತಿದೆ. ಶ್ರೀಲಂಕಾ ವಿರುದ್ಧದ T20I ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು InsideSport ಗೆ ತಿಳಿಸಿವೆ.