ಶಿವಮೊಗ್ಗ : ಎಂಎಲ್‌ಎ ಪುತ್ರ ಮಹಿಳಾ ಅಧಿಕಾರಿಯೊಬ್ಬರಿಗೆ ಅಶ್ಲೀಲವಾಗಿ ಬೈದಿರುವ ವಿಡಿಯೋವೊಂದು ವೈರಲ್ ಆಗಿದೆ. ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಗೆ ಶಾಸಕನ ಪುತ್ರನಿಂದ ಅವಾಚ್ಯ ಬೈಗುಳ ಮತ್ತು ಬೆದರಿಕೆ ಒಡ್ಡಲಾದ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿಯಾಗಿ 2 ವಿಡಿಯೋಗಳು ವೈರಲ್ ಆಗಿದ್ದು, ಇದು ಎಲ್ಲಿ ನಡೆದಿದೆ. ವಿಡಿಯೋದಲ್ಲಿ ಅಶ್ಲೀಲ ಅದರಲ್ಲೂ ಮಹಿಳಾ ಅಧಿಕಾರಿಯೊಬ್ಬರಿಗೆ ಈ ರೀತಿ ಬೈಗುಳದ ಮಾತುಗಳನ್ನಾಡಿರುವ ವ್ಯಕ್ತಿ ಯಾರು ಎಂಬುದು ಇದೀಗ ತಿಳಿದು ಬರಬೇಕಿದೆ.
ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರಿಗೆ ಕಿಂಚಿತ್ತು ಗೌರವವನ್ನೆ ನೀಡದೇ ಮಾತನಾಡುವ ಹೀನ ಮನಸ್ಥಿತಿ ತೋರಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಆಗ್ರಹವೂ ಕೇಳಿಬರುತ್ತಿದೆ. ಅಷ್ಟಕ್ಕೂ ಮಹಿಳಾ ಅಧಿಕಾರಿಯೊಬ್ಬರು, ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಜಾಗದ ಮೇಲೆ ತಡರಾತ್ರಿ ರೇಡ್ ನಡೆಸಿದ್ದಾರೆ. ಈ ಹೊತ್ತಿನಲ್ಲಿ ಈ ರೀತಿ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಈ ವಿಡಿಯೋದಲ್ಲಿ ಕಾಣುತ್ತಿರುವಂತೆ, ಪುತ್ರನೊಬ್ಬನಿಗೆ ಅಲ್ಲಿನ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆತನಿಂದ ಫೋನ್ ಕಾಲ್ ಮೂಲಕ ವಿಷಯ ತಿಳಿದ ಎಂಎಲ್‌ಎ ಪುತ್ರ ಎನ್ನಲಾದ ವ್ಯಕ್ತಿಯು ಅಧಿಕಾರಿಗೆ ಫೋನ್ ಕೊಡಲು ತಿಳಿಸಿದ್ದಾರೆ. ಆದರೆ ಫೋನ್ ತೆಗೆದುಕೊಂಡು ಮಾತನಾಡಲು ಒಪ್ಪದ ಅಧಿಕಾರಿ ತಮ್ಮ ಫೋನ್‌ಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಅಷ್ಟಕ್ಕೆ ಕೆಟ್ಟ ರೀತಿಯಲ್ಲಿ ಮಾತನಾಡಲು ಆರಂಭಿಸಿದ ಆ ವ್ಯಕ್ತಿಯು ಮಹಿಳೆ ಎನ್ನುವುದನ್ನು ಸಹ ನೋಡದೇ ಅಶ್ಲೀಲವಾಗಿ ನಿಂದಿಸಿದ್ದಾರೆ. ಇದಕ್ಕೆ ಮಹಿಳಾ ಅಧಿಕಾರಿ ಆಕ್ಷೇಪಿಸಿದರೂ ಸಹ ಮಾತು ನಿಲ್ಲಿಸದ ಆ ವ್ಯಕ್ತಿಯು ಅಧಿಕಾರಿಯನ್ನು ಹೀನಾಮಾನ ನಿಂದಿಸಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ಒಬ್ಬರು ರೆಕಾರ್ಡ್ ಮಾಡಿಕೊಂಡಿದ್ದು, ಆ ದೃಶ್ಯದಲ್ಲಿ ಫೋನ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಹೆಸರು ಸಹ ಕಾಣಿಸುತ್ತಿದೆ. ಇದೇ ವೇಳೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡುವುದು ಸಹ ರೆಕಾರ್ಡ್ ಆಗಿರುವ ದೃಶ್ಯದಲ್ಲಿ ಕಾಣುತ್ತಿದೆ. ಆದರೆ, ಇಂಥಹವರೇ ಇಲ್ಲಿ ಆವಾಜ್ ಹಾಕಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಪುರಾವೇ ಇಲ್ಲದೇ ಇರುವುದು ಇಡೀ ಘಟನೆಗೆ ತಿಲಾಂಜಲಿ ಇಟ್ಟಂತಾಗಿದೆ.
ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂಬ ವಿಡಿಯೋ ವೈರಲ್ ಆದ ಹಿನ್ನೆಲೆ ನಾಗರೀಕ ಸಮಾಜ ತಲೆತಗ್ಗಿಸುವ ಹಾಗೆ ಮಹಿಳಾಧಿಕಾರಿಯನ್ನು ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ದೌರ್ಜನ್ಯ ಎಸಗಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸಮಾಜದ ಜಾಗೃತ ನಾಗರೀಕರಾಗಿ ನಾವು ಪ್ರತಿಭಟಿಸಬೇಕಲ್ಲವೇ ಭದ್ರಾವತಿ ನಾಗರೀಕರು ದುರ್ಬಲರಲ್ಲ ಎಂದು ರಾಜ್ಯಕ್ಕೆ ತೋರಿಸೋಣ ಮಹಿಳೆಯರ ರಕ್ಷಣೆ ನಮ್ಮ ಹೊಣೆ ಎಂದು ರಾಜ್ಯಕ್ಕೆ ಪರಿಚಯಿಸೋಣ ಎಂದುಬಿಜೆಪಿ ಮುಖಂಡರು ಪ್ರತಿಭಟನೆಗೆ ಕರೆ ನೀಡಿದ್ದಾರೆ.