ಶಿರಾ ; ಭೂ ಸುರಕ್ಷಾ ಯೋಜನೆಯಡಿಯಲ್ಲಿ ಅಭಿಲೇಖಾಲಯದ ಎಲ್ಲ ದಾಖಲೆಗಳ ಗಣಕೀಕರಣಕ್ಕೆ ಗೃಹ ಸಚಿವ ಜಿ ಪರಮೇಶ್ವರ್, ಚಾಲನೆ ನೀಡಿದರು.
ಶುಕ್ರವಾರ ಸಂಜೆ ನಗರದ ಮಿನಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ದಾಖಲೆಗಳ ಡಿಜಿಟಲೀಕರಣದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ತಾಲೂಕುಗಳ ದಾಖಲೆಗಳು ಆಧುನೀಕರಣ ಯೋಜನೆಯಡಿ ಡಿಜಿಟಲೀಕರಣಗೊಳ್ಳಲಿವೆ ಎಂದು ಅವರು ಹೇಳಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಪ್ರಮುಖ ದಾಖಲೆಗಳ ಗಣಕೀಕರಣಗೊಳಿಸುವ ನಿಟ್ಟಿನಲ್ಲಿ ದಾಖಲೆಗಳ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್ ಹಾಗೂ ಡಾಟಾ ಎಂಟ್ರಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ದಾಖಲೆಗಳನ್ನು ಪಡೆಯಬಹುದು.
ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದಡಿ (ಡಿಐಎಲ್‌ಆರ್‌ಎಂಪಿ) ಕಂದಾಯ ಇಲಾಖೆ ಕೈಗೆತ್ತಿಕೊಂಡಿರುವ ಈ ಯೋಜನೆಯಡಿ ತಾಲೂಕು ಕಚೇರಿಗಳ ರೆಕಾರ್ಡ್ ರೂಂಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು ಹಿಂದೆ ಎಸ್ ಎಂ.ಕೃಷ್ಣ ಅವರ ಕಾಲದಲ್ಲಿ ಚಾಲನೆ ಪಡೆದುಕೊಂಡಿದ್ದ ‘ಭೂಮಿ’ ಯೋಜನೆಯ ಮುಂದುವರಿದ ಭಾಗವಾಗಿದೆ. ಈ ಡಿಜಿಟಲೀಕರಣದಿಂದ ಕಂದಾಯ ಕಚೇರಿಗಳ ಮೇಲಿನ ಒತ್ತಡ ತಗ್ಗಲಿದ್ದು, ಜನಸಾಮಾನ್ಯರಿಗೆ ಅವಶ್ಯಕ ಆಸ್ತಿ ದಾಖಲೆಗಳು ಆನ್‌ಲೈನ್‌ನಲ್ಲಿ ಸಿಗಲಿವೆ. ಸ್ವತ್ತುಗಳ ಮರು ಸಮೀಕ್ಷೆ ನಡೆಸಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಸಿಗುವಂತೆ ಮಾಡಲಾಗಿದೆ. ಸರ್ವೆ ನಕ್ಷೆಗಳೊಂದಿಗೆ ದಾಖಲೆಗಳನ್ನು ರೆಕಾರ್ಡ್ ರೂಂಗಳ ಡಿಜಿಟಲೀಕರಣದಿಂದ ತಾಲೂಕು ಕಚೇರಿಗಳ ಆಡಳಿತ ಸುಸೂತ್ರವಾಗಲಿದ್ದು, ಬಹುತೇಕ ಕಾಗದ ರಹಿತ ಆಗಲಿದೆ. ಭೂದಾಖಲೆಗಳ ಡಾಟಾಬೇಸ್‌ನೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಿಂದ ಆರ್‌ಟಿಸಿ ಸೇರಿ ಆಸ್ತಿಗಳ ಎಲ್ಲ ದಾಖಲೆ ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ದೊರಕಲಿವೆ. ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ .ಟಿ ಬಿ ಜಯಚಂದ್ರ . ಜಿಲ್ಲಾಧಿಕಾರಿ ಶುಭ ಕಲ್ಯಾಣ್,ಜಿ ಪಂ ಸಿ.ಇ.ಓ ಪ್ರಭು, ತಹಸೀಲ್ದಾರ್ ದತ್ತಾತ್ರೇಯ ಗಾದಾ ಸೇರಿದಂತೆ ನಗರ ಯೋಜನೆ ಪ್ರಾಧಿಕಾರದ ಅದ್ಯಕ್ಷ ಪಿ.ಅರ್.ಮಂಜುನಾಥ್ ಸೇರಿದಂತೆ.ತಾಲ್ಲೂಕು ಅಡಳಿತ ನಿಯಂತ್ರಣದ ಅಧಿಕಾರಿಗಳು ಅನೇಕ ಮುಖಂಡರು,ಗಣ್ಯರು ಉಪಸ್ಥಿತರಿದ್ದರು.


