ವಿಜಯಪುರ : ಬುಧವಾರ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ಮುಜಗೊಂಡ ರಕ್ಷಣಾ ಕಾರ್ಯಾಚರಣೆ ಮುಗಿದಿದ್ದು ,20 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡವು ಮಗುವನ್ನು ಜೀವಂತವಾಗಿ ಹೊರತೆಗೆದಿದೆ. ತಂದೆ-ತಾಯಿ ಸೇರಿ ಲಕ್ಷಾಂತರ ಜನರು ಸಲ್ಲಿಸಿದ ಪ್ರಾರ್ಥನೆ ಫಲಿಸಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕು ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ಸಾವು ಗೆದ್ದು ಬಂದಿದ್ದಾನೆ. ಮಗುವನ್ನು ಹೊರ ತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರ ತಂಡ ಬಳಿಕ ಆಂಬುಲೆನ್ಸ್‌ನಲ್ಲಿ ಮಗುವನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದೆ. ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿಯ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಮಗು ಜೀವಂತವಾಗಿ ಬಂದಿದೆ. ರಕ್ಷಣಾ ಕಾರ್ಯಾಚರಣೆ ಇನ್ನೇನು ಕೊನೆ ಕ್ಷಣಕ್ಕೆ ತಲುಪುತ್ತಿದ್ದಂತೆಯೇ ಮಗು ಅಳುವ ಸದ್ದು ಜೋರಾಗಿ ಕೇಳಿಸುತ್ತಿತ್ತು.
ಮಗು ಬಿದ್ದ ಅರ್ಧ ಗಂಟೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಕಾರಣ ಮಗುವನ್ನು ರಕ್ಷಿಸಲು ಸಾಧ್ಯವಾಯಿತು. ಬುಧವಾರ ರಾತ್ರಿಯೇ ಹಿಟಾಚಿ ಮೂಲಕ ಕೊಳವೆಬಾವಿ ಪಕ್ಕದಲ್ಲಿ ಅಡ್ಡವಾಗಿ 3 ಅಡಿ ರಂಧ್ರ ಕೊರೆಯಲಾಯಿತು. ಆ ರಂಧ್ರದ ಮೂಲಕವೇ ಬಾಲಕ ಬಿದ್ದಿರುವ ಜಾಗಕ್ಕೆ ಹಗ್ಗದ ಮೂಲಕ ಒಂದು ಕ್ಯಾಮೆರಾ ಇಳಿಸಲಾಯಿತು. ಬಾಲಕನ ಚಲನವಲನದ ಮೇಲೆ ಕ್ಯಾಮೆರಾ ಮೂಲಕ ನಿಗಾ ಇರಿಸಿ, ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಯಿತು.
ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. 2000 ನೇ ಇಸವಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ , ದಾವಣಗೆರೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8 ಪ್ರಕರಣಗಳು ನಡೆದಿದೆ. ಆದರೆ ಬದುಕಿ ಬಂದಿದ್ದು ಮಾತ್ರ ಕೇವಲ ಒಂದು ಘಟನೆ, 2008ರಲ್ಲಿ ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲೂ ಕೊಳವೆಬಾವಿ ದುರಂತದಲ್ಲಿ 20 ವರ್ಷದ ಕಲ್ಲವ್ವ ಎಂಬುವವರು ಬದುಕಿ ಬಂದಿದ್ದರು. ಆಗ ಅವಳಿಗೆ ಬದುಕಿ ಬಂದ ಫ್ರಿನ್ಸ್ ಅಂತ ಹೆಸರು ಕೊಡಲಾಗಿತ್ತು.


