ವಿಜಯಪುರ : ಭಾನುವಾರ ನಸುಕಿನಲ್ಲಿ ರಾಜ್ಯದ ಮಲ್ಲಾಪುರ ಗ್ರಾಮದ ಬಳಿ NH13 ನಲ್ಲಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಸಾಲವಾಡಗಿಯ ಸಂಗನಬಸವಪ್ಪ (36) ಅವರ ಪತ್ನಿ ರೇಖಾ (29), ಪುತ್ರಿ ಅಗಸ್ತ್ಯ (7), ಸಂಬಂಧಿ ಭೀಮಾಶಂಕರ (26) ಹಾಗೂ ಚಾಲಕ ಮಧುಸೂಧನ್ (25) ಮೃತ ದುರ್ದೈವಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸಂಗಬಸವಪ್ಪ ಅವರ ಮತ್ತೋರ್ವ ಪುತ್ರ ಆದರ್ಶ(3) ಹಾಗೂ ಪುತ್ರಿ ಅನ್ವಿಕಾ(5) ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಂಕ್ ಉದ್ಯೋಗಿ ಸಂಗನಬಸವಪ್ಪ ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದರು. ಆಗಸ್ಟ್ 12 ರಂದು ರಾತ್ರಿ 11:00 ಗಂಟೆ ಸುಮಾರಿಗೆ ವಿಜಯಪುರದಿಂದ ಹೊರಟಿದ್ದರು. ಕಾರು ಚಾಲಕ ಬ್ಯಾಲೆನ್ಸ್ ಕಳೆದುಕೊಂಡು ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಪರಶುರಾಮ್ ಕೆ. ಭೇಟಿನೀಡಿ ತನಿಖೆ ನಡೆಸುತ್ತಿದ್ದಾರೆ .