ವಯನಾಡು : ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಿಂದ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿ ಹೋಗಿದೆ. ರಾಜ್ಯ ಕಂಡು ಕೇಳರಿಯದ ದುರಂತ ವಯನಾಡಿನಲ್ಲಿ ಸಂಭವಿಸಿದ್ದು, ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಇಂದೂ ವಯನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಆತಂಕ ಮೂಡಿಸಿದೆ.
ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಮುಂಡಕ್ಕೈ ಮತ್ತು ಚೂರಲ್ಮಲಾ ಗ್ರಾಮಗಳಲ್ಲಿ ಹಲವಾರು ಭೂಕುಸಿತಗಳು ವರದಿಯಾಗಿವೆ. ಮಲಪ್ಪುರಂನ ನಿಲಂಬೂರ್ ಪ್ರದೇಶದಲ್ಲಿನ ಚಾಲಿಯಾರ್ ನದಿಯಿಂದ ಹಲವಾರು ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಅನೇಕ ದೇಹಗಳು ಕೊಚ್ಚಿಹೋಗಿರುವ ಶಂಕೆ ಇದೆ ವರದಿಯಾಗಿದೆ.
ಮುಂಡಕ್ಕೈ ಗ್ರಾಮಕ್ಕೆ ತೆರಳುವ ಮುಖ್ಯ ಸೇತುವೆ ಕುಸಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಭಾರತೀಯ ಸೇನೆ ಮತ್ತು ನೌಕಾಪಡೆ ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಜೊತೆಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ನಿಯೋಜಿಸಲಾಗಿದೆ.
ಕೇರಳವು ಪ್ರತಿ ವರ್ಷವೂ ಮಳೆಗಾಲದಲ್ಲಿ ಮಾರಣಾಂತಿಕ ಭೂಕುಸಿತಕ್ಕೆ ಸಾಕ್ಷಿಯಾಗುತ್ತದೆ. ಆದರೆ ಇದು ಏಕೆ ಸಂಭವಿಸುತ್ತದೆ? ನಾವು ವಿವರಿಸುತ್ತೇವೆ.
ಕೇರಳದಲ್ಲಿ ಇತ್ತೀಚಿನ ಪ್ರವಾಹ, ಭೂಕುಸಿತ
ಕೇರಳವು 2018 ರಲ್ಲಿ ವಿನಾಶಕಾರಿ ಪ್ರವಾಹವನ್ನು ವರದಿ ಮಾಡಿದೆ – ಅದರ ಇತಿಹಾಸದಲ್ಲಿ ಅತ್ಯಂತ ಕೆಟ್ಟದು – ಇದು 483 ಜನರನ್ನು ಬಲಿಪಡೆದಿದೆ . ಆ ವರ್ಷದ ಆಗಸ್ಟ್‌ನಲ್ಲಿ ಕೇವಲ ಮೂರು ದಿನಗಳಲ್ಲಿ, ದಕ್ಷಿಣ ರಾಜ್ಯವು ತನ್ನ ಸರಾಸರಿ ವಾರ್ಷಿಕ ಮಳೆಯ ಮೂರನೇ ಒಂದು ಭಾಗ ಸುರಿದಿದೆ .
1961 ಮತ್ತು 2016 ರ ನಡುವೆ ಕೇರಳದಲ್ಲಿ ಭೂಕುಸಿತದಿಂದಾಗಿ ಸುಮಾರು 295 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಅಪಾಯದ ಸಲಹೆಗಾರರಾದ ಡಾ ಎಸ್ ಶ್ರೀಕುಮಾರ್ ಅವರು 2022 ರಲ್ಲಿ ದಿ ವೀಕ್‌ಗೆ ತಿಳಿಸಿದರು. “ಸಾವು ಮತ್ತು ಹಾನಿಯ ಪ್ರಮಾಣ ಮತ್ತು 2018 ರಿಂದ ಭೂಕುಸಿತದ ನಿದರ್ಶನಗಳಲ್ಲಿ ಭಾರಿ ಹೆಚ್ಚಳವಿದೆ. ” ಅಂದರು.
2019 ಮತ್ತು 2020 ರ ಮಾನ್ಸೂನ್‌ನಲ್ಲಿ ಇದೇ ರೀತಿಯ ದುರಂತಗಳು ವರದಿಯಾಗಿ 100 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿವೆ.
2021 ರಲ್ಲಿ, ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಅನೇಕ ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ನೂರಾರು ಜನರು ಸಾವನ್ನಪ್ಪಿದರು.
2022 ರಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಂತಹ ಮಳೆ ಸಂಬಂಧಿತ ಘಟನೆಗಳಿಂದ ರಾಜ್ಯದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ.
ಕಳೆದ ಜನವರಿಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದ ಭಾರತದ ಹವಾಮಾನ ವರದಿಯು 2022 ರಲ್ಲಿ ಕೇರಳದಲ್ಲಿ ಹವಾಮಾನ ವೈಪರೀತ್ಯಗಳು 32 ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಕಂಡುಹಿಡಿದಿದೆ. ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ 30 ಜನರು ಸಾವನ್ನಪ್ಪಿದ್ದರೆ, ಗುಡುಗು ಮತ್ತು ಸಿಡಿಲುಗಳಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಜುಲೈ 2022 ರಲ್ಲಿ, ಭೂ ವಿಜ್ಞಾನ ಸಚಿವಾಲಯವು ಲೋಕಸಭೆಗೆ ತಿಳಿಸಿದ್ದು, ಕಳೆದ ಏಳು ವರ್ಷಗಳಲ್ಲಿ ಕೇರಳವು ದೇಶದಲ್ಲಿ ಅತಿ ಹೆಚ್ಚು ಭೂಕುಸಿತಗಳಿಗೆ ಸಾಕ್ಷಿಯಾಗಿದೆ. 2015 ಮತ್ತು 2022 ರ ನಡುವಿನ 3,782 ಭೂಕುಸಿತಗಳಲ್ಲಿ, ಸುಮಾರು 59.2 ಪ್ರತಿಶತ ಅಥವಾ 2,239, ದೇವರ ಸ್ವಂತ ದೇಶದಲ್ಲಿ ವರದಿಯಾಗಿದೆ.
ಕೇರಳದ ವಯನಾಡಿನಲ್ಲಿ ಸಂಭವಿಸಿರೋ ಘೋರ ಗುಡ್ಡ ಕುಸಿತದಲ್ಲಿ ಕರ್ನಾಟಕದ ನಾಲ್ವರು ಬಲಿಯಾಗಿದ್ದಾರೆ. ಮೃತರು ಚಾಮರಾಜನಗರ ಜಿಲ್ಲೆಯವರು ಎಂಬುದು ಪತ್ತೆಯಾಗಿದೆ. 50 ವರ್ಷದ ರಾಜೇಂದ್ರ, 45 ವರ್ಷದ ರತ್ನಮ್ಮ, ವಯನಾಡಿನ ಮೇಪಾಡಿಯಲ್ಲಿ ವಾಸವಿದ್ದ 62 ವರ್ಷದ ಪುಟ್ಟಸಿದ್ದಶೆಟ್ಟಿ ಮತ್ತು 50 ವರ್ಷದ ರಾಣಿ ಎಂಬವರು ಸಾವನಪ್ಪಿದ್ದಾರೆ. ಇವರೆಲ್ಲರೂ ಚಾಮರಾಜನಗರ ಜಿಲ್ಲೆಯವರು.ರಾಜೇಂದ್ರ ಮತ್ತು ರತ್ನಮ್ಮ ಇರಸವಾಡಿ ಗ್ರಾಮದವರಾಗಿದ್ದು ಈ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇವರಿಬ್ಬರೂ ಕೇರಳದ ಚೂರಲ್ಲಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಚಾಮರಾಜನಗರದ ಜಿಲ್ಲೆಯ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಯನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಮೃತರ ಕುಟುಂಬದವರ ಜತೆ ಸಂಪರ್ಕದಲ್ಲಿದ್ದಾರೆ.
ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವರನ್ನು ಮದುವೆಯಾಗಿದ್ದ ಝಾನ್ಸಿರಾಣಿ ಕುಟುಂಬ ಕೇರಳದಲ್ಲಿ ನೆಲೆಸಿತ್ತು. ಭೂಕುಸಿತದಲ್ಲಿ ಗಂಭೀರ ಗಾಯಗೊಂಡಿರುವ ಅನಿಲ್, ಪತ್ನಿ ಝಾನ್ಸಿ ಹಾಗೂ ತಂದೆ ದೇವರಾಜುರನ್ನು ಕೇರಳದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನು, ಝಾನ್ಸಿರಾಣಿ ಪುತ್ರ ಎರಡೂವರೆ ವರ್ಷದ ಕಂದಮ್ಮ ನಿಹಾಲ್ ಹಾಗೂ ಅತ್ತೆ ಲೀಲಾವತಿ (55) ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಝಾನ್ಸಿರಾಣಿ ಕುಟುಂಬಸ್ಥರನ್ನ ಕಾಣಲು ಕೆ.ಆರ್.ಪೇಟೆಯಿಂದ ಕೇರಳಕ್ಕೆ ತೆರಳಿದ್ದಾರೆ. ಘಟನೆ ನೆನೆದು ಆಸ್ಪತ್ರೆಯಲ್ಲಿ ಗಾಯಾಳು ಅನಿಲ್ ಕಣ್ಣೀರಿಟ್ಟಿದ್ದಾರೆ.
ವೈನಾಡಿನಲ್ಲಿ ಕರ್ನಾಟಕ ಮೂಲದ ನಾಪತ್ತೆಯಾದವರಿಗಾಗಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಶೋಧ ನಡೆದಿದೆ. ಈವರೆಗೆ ಗೊತ್ತಾಗಿರುವ, ನಾಪತ್ತೆಯಾಗಿರುವ ರಾಜ್ಯದ 10 ಮಂದಿಯ ಹೆಸರುಗಳು ಹೀಗಿವೆ:
ಗುರುಮಲ್ಲನ್(10)
ಸಾವಿತ್ರಿ (54)
ಸಬಿತಾ (43)
ಶಿವಣ್ಣನ್ (50)
ಅಪ್ಪಣ್ಣನ್(39)
ಅಶ್ವಿನ್ (13)
ಜೀತು (11)
ದಿವ್ಯಾ (35)
ರತ್ನಾ(48)
ಹನಿಮೂನ್‌ಗೆ ಬಂದವರು ಹೆಣವಾದರು
ಬೆಂಗಳೂರಿನಿಂದ ಹನಿಮೂನ್‌ಗೆ ಬಂದಿದ್ದ 4 ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಒರಿಸ್ಸಾ ಮೂಲದ ಎರಡು ನವ ಜೋಡಿಗಳು ಬಂದು ತಂಗಿದ್ದ ರೆಸಾರ್ಟ್ ಇವರು ಮಲಗಿದ್ದಲ್ಲೇ ಕೊಚ್ಚಿ ಹೋಗಿದೆ. ರೆಸಾರ್ಟ್‌ನಿಂದ 300 ಮೀಟರ್ ದೂರದಲ್ಲಿ ಕಾರಿನಲ್ಲಿ ಮಲಗಿದ್ದ ಹಾವೇರಿ ಮೂಲದ ಡ್ರೈವರ್ ಮಂಜುನಾಥ್ ಪಾರಾಗಿದ್ದಾರೆ. ಇವರು ದುರಂತದಲ್ಲಿ ಬದುಕುಳಿದಿದ್ದೇ ಅಚ್ಚರಿ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಮಲಗಿದ್ದಕ್ಕೆ ಪ್ರಾಣ ಉಳಿಯಿತು. ರೆಸಾರ್ಟ್‌ನಲ್ಲಿ ಮಲಗಿದ್ರೆ ನಾನು ಬದುಕುತ್ತಿರಲಿಲ್ಲ. ಎತ್ತರದ ಪ್ರದೇಶದಲ್ಲಿ ಕಾರ್ ನಿಲ್ಲಿಸಿದ್ದರಿಂದ ಬಚಾವ್ ಆಗಿದ್ದೇನೆ. ನನ್ನ ಕಾರು ಕೂಡ ಅಲ್ಲೇ ಇದೆ ಎಂದು ಕೇರಳದ ವಯನಾಡಿನಲ್ಲಿ ಕ್ಯಾಬ್ ಡ್ರೈವರ್ ಮಂಜುನಾಥ್ ಹೇಳಿಕೆ ನೀಡಿದ್ದಾರೆ.
ಹೊಸ ಮನೆ ಗೃಹಪ್ರವೇಶ ಮಾಡಿ ಕೆಲವೇ ದಿನದಲ್ಲಿ ಕೊಚ್ಚಿಹೋದ ಮನೆ
ಕೂಲಿ ಮಾಡಿ ಕೇರಳದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಆರು ತಿಂಗಳ ಹಿಂದೆಯಷ್ಟೇ ಹೊಸಮನೆ ಖರೀದಿಸಿದ್ದರು. ಸಂಬಂಧಿಕರು, ಸ್ನೇಹಿತರನ್ನು ಕರೆದು ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದರು. ಈಗ ದುರಂತದಲ್ಲಿ ದಂಪತಿ ಮನೆ ಸಮೇತ ಜಲಸಮಾಧಿಯಾಗಿದ್ದಾರೆ. ಈ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಚಾಮರಾಜನಗರದ ಜಿಲ್ಲೆಯ ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಯನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಮೃತರ ಕುಟುಂಬದವರ ಜತೆ ಸಂಪರ್ಕದಲ್ಲಿದ್ದಾರೆ.
ಜಿಲ್ಲಾಡಳಿತ ಸಹಾಯವಾಣಿ
ಸಂತ್ರಸ್ತರಿಗಾಗಿ ಮೈಸೂರು ಜಿಲ್ಲಾಡಳಿತ ಸಹಾಯವಾಣಿ ತೆರೆದಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. 0821-2423800 ಅಥವಾ 1077 ದೂರವಾಣಿಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.