ರಿಯೋ ಡಿಜನೈರೋ : ಬ್ರಿಕ್ಸ್ ಸದಸ್ಯ ದೇಶಗಳು ಭಾರೀ ಮಹತ್ವದ ಖನಿಜಗಳು ಹಾಗೂ ತಂತ್ರಜ್ಞಾನದ ಪೂರೈಕೆ ಸರಪಳಿಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು ಜೊತೆಗೂಡಿ ಕಾರ್ಯನಿರ್ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲಿ ಒತ್ತಾಯಿಸಿದರು. 2026 ರಲ್ಲಿ ಬ್ರಿಕ್ಸ್ ನ 18ನೇ ಶೃಂಗಸಭೆ ಭಾರತದಲ್ಲಿ ನಡೆಯಲಿದೆ.
ಬಹುಪಕ್ಷೀಯತೆ, ಆರ್ಥಿಕ-ಹಣಕಾಸು ವಿಷಯ ಹಾಗೂ ಕೃತಕ ಬುದ್ಧಿಮತ್ತೆ ಬಲಪಡಿಸುವ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು,
ಯಾವುದೇ ದೇಶವು ಸಂಪನ್ಮೂಲಗಳನ್ನು ತನ್ನ ಸ್ವಾರ್ಥಕ್ಕಾಗಿ ಅಥವಾ ಇತರ ವಿರುದ್ಧ ಅಸ್ತçವಾಗಿ ಬಳಸಿಕೊಳ್ಳದಿರುವುದೇ ಇಲ್ಲಿ ಮುಖ್ಯ ಸಂಗತಿ ಎಂದರು.
ವಿಶ್ವದಲ್ಲಿ ಬಹಳ ಪ್ರಮುಖ ಖನಿಜಗಳ ಪೂರೈಕೆಯಲ್ಲಿ ಗಮನಾರ್ಹವಾದ ನಿಯಂತ್ರಣ ಹೊಂದಿರುವ ಚೀನಾ ಈ ಮಿತ್ರಕೂಟದಲ್ಲಿ ಭಾರತ, ಬ್ರೆಜಿಲ್ ಹಾಗೂ ರಷ್ಯಾ ಜೊತೆ ಸ್ಥಾಪಕ ಸದಸ್ಯನಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಮೇಲಿನ ಮಾತುಗಳನ್ನಾಡಿರುವುದು ಉಲ್ಲೇಖನೀಯವಾಗಿದೆ. ಈ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಭಾಗವಹಿಸದೇ ಪ್ರಧಾನಿಲಿ ಕ್ವಿಯಾಂಗ್ ಪ್ರತಿನಿಧಿಯಾಗಿದ್ದಾರೆ.
ಈ ಶೃಂಗಸಭೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯಲ್ಲಿ ಸುಧಾರಣೆಗಳಿಗೆ ಒತ್ತು ನೀಡಿರುವುದನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಜಾಗತಿಕವಾಗಿ ದಕ್ಷಿಣ ದೇಶಗಳ ಅಭಿವೃದ್ಧಿ ಆಕಾಂಕ್ಷೆಗಳನ್ನು ಬೆಂಬಲಿಸುವಲ್ಲಿ ಬ್ರಿಕ್ಸ್ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್(ಎನ್‌ಡಿಬಿ) ಬಲವಾದ ಹಾಗೂ ವಿಶ್ವಾಸಾರ್ಹವಾದ ಪರ್ಯಾಯ ಹಣಕಾಸು ವ್ಯವಸ್ಥೆಯಾಗಿದೆ ಎಂದರು. ನಮ್ಮ ಆಂತರಿಕ ವ್ಯವಸ್ಥೆಯನ್ನು ಬಲಪಡಿಸುವುದು ಬಹುರಾಷ್ಟ್ರೀಯತೆ ಸುಧಾರಣೆಗೆ ನಮ್ಮ ಆಗ್ರಹದ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚುವುದೆಂದರು.
ಕೃತಕ ಬುದ್ಧಿಮತ್ತೆಯ ಅಪಾಯಗಳು, ನೈತಿಕತೆ ಹಾಗೂ ಪಕ್ಷಪಾತದ ಬಗೆಗೂ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ಸದಸ್ಯ ದೇಶಗಳು ಜವಾಬ್ದಾರಿಯುತ
ಕೃತಕ ಬುದ್ಧಿಮತ್ತೆಗಾಗಿ ಕಾರ್ಯನಿರ್ವಹಿಸಬೇಕೆಂದೂ ಅವರು ಒತ್ತಾಯಿಸಿದರು. ಡಿಜಿಟಲ್ ವಿಷಯದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಜಾಗತಿಕ ಮಾನದಂಡಗಳನ್ನು ರಚಿಸಬೇಕು. ಇದರಿಂದ ನಾವು ವಿಷಯದ ಮೂಲವನ್ನು ಗುರುತಿಸಬಹುದು. ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ದುರುಪಯೋಗವನ್ನೂ ತಡೆಯಬಹುದೆಂದರು.