ರಿಪ್ಪನ್ ಪೇಟೆ : ಆಹಾ ಈ ಬೆದರು ಗೊಂಬೆಗೆ ಜೀವ ಬಂದಂತಾಗಿದೆ ಎಂಬ ಗಾಳಿಪಟ ಚಿತ್ರದ ಭಟ್ಟರ ಹಾಡಿನ್ನು ನೆನಪಿಸುತ್ತದೆ ಈ ಸ್ಟೋರಿ,ನಾವುಗಳು ಇಷ್ಟು ದಿನ ತೋಟ ಹೊಲಗಳಿಗೆ ದೃಷ್ಟಿ ಆಗಬಾರದೆಂದು ದೇವರ ಹರಕೆ ಹಾಗೂ ಬೆದರು ಗೊಂಬೆಗಳನ್ನ ಇಟ್ಟಿದ್ದನ್ನ ಕಂಡಿದ್ದೇವೆ.
ಇದೀಗ ವಿಭಿನ್ನವಾದ ಪ್ರಯೋಗಕ್ಕೆ ಶಿವಮೊಗ್ಗದ ರೈತ ಮುಂದಾಗಿದ್ದಾರೆ. ರಸ್ತೆ ಬದಿಯಲ್ಲಿರೋ ತಮ್ಮ ಬಾಳೆತೋಟಕ್ಕೆ ನಟಿಯರ ಫೋಟೋ ಹಾಕಿಸಿದ್ದಾರೆ.ದೃಷ್ಟಿಯ ತಲೆ ನೋವನ್ನು ಭಿನ್ನ ಪ್ರಯತ್ನದಿಂದ ಬೇರೆಡೆಗೆ ಸೆಳೆಯಲು ಮಳವಳ್ಳಿ ಗ್ರಾಮದ ರೈತ.
ಹೌದು ಈ ರೈತನ ತೋಟ ಕಾಯುತ್ತಿರುವುದು ಸಿನಿಮಾ ನಟಿಯರು!!!
ಶಿವಮೊಗ್ಗ ಜಿಲ್ಲೆಯ ಹೊಸನಗರದ ರಿಪ್ಪನ್ ಪೇಟೆ ಬೆಳೆಯ ಮಳವಳ್ಳಿ ಗ್ರಾಮದ ರೈತ ರಂಗಸ್ವಾಮಿ ಈ ವಿಭಿನ್ನ ಪ್ರಯೋಗ ಮಾಡಿದ್ದಾರೆ. ಸದ್ಯ ತೋಟದಲ್ಲಿ ಅಳವಡಿಸಲಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಳೆ ಇಲ್ಲದೇ ಬೆಳೆದ ಅಲ್ಪ ಸ್ವಲ್ಪ ಬೆಳೆಯನ್ನು ಕಾಪಾಡಿಕೊಳ್ಳೋದು ರೈತರಿಗೆ ದೊಡ್ಡ ಸವಾಲು ಆಗಿದೆ. ಮಲೆನಾಡು, ಅರಣ್ಯ ಗಡಿ ವ್ಯಾಪ್ತಿಯಲ್ಲಿರೋ ರೈತರು ಬೆಳೆಯ ರಕ್ಷಣೆಗಾಗಿ ಹಲವು ಉಪಾಯಗಳನ್ನು ಮಾಡುತ್ತಾರೆ.
ತೋಟದಲ್ಲಿ ಜನರಿದ್ದಾರೆ ಎಂದು ತೋರಿಸಲು ಬೆದರುಗೊಂಬೆಗಳನ್ನು ಹಾಕುತ್ತಾರೆ. ಇನ್ನು ಕೆಲವರು ಬೆಳೆಗೆ ದೃಷ್ಟಿಯಾಗದಿರಲಿ ಎಂದು ದೃಷ್ಟಿಗೊಂಬೆಗಳನ್ನು ಸಹ ಅಳವಡಿಸುತ್ತಾರೆ.
ರೈತ ರಂಗಸ್ವಾಮಿ ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಬೆಳೆಯು ಉತ್ತಮವಾಗಿದ್ದು, ಬಾಳೆ ತೋಟಕ್ಕೆ ದೃಷ್ಟಿ ಆಗಬಾರದೆಂದು ನಟಿಯರ ಫೋಟೋ ಹಾಕಿದ್ದಾರೆ.ತೋಟದ ಸುತ್ತಲೂ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋಗಳನ್ನು ರಂಗಸ್ವಾಮಿ ಹಾಕಿದ್ದಾರೆ. ಗ್ರಾಮಸ್ಥರು ಈ ಫೋಟೋಗಳನ್ನು ನೋಡಲು ಬರುತ್ತಿದ್ದಾರೆ.
ಹಲವು ಬಾರಿ ದೃಷ್ಟಿಗೊಂಬೆಗಳನ್ನ ಇಟ್ಟು ಯಾವುದೇ ಪ್ರಯೋಜನವಾಗದ ನಂತರ ನಟಿಯರ ಫೋಟೋವನ್ನು ದೃಷ್ಟಿ ಗೊಂಬೆ ಜಾಗದಲ್ಲಿ ಇರಿಸಿದ್ದೇನೆ,ನಟಿಯರ ಫೋಟೋವನ್ನು ಜನರು ನೋಡಿಕೊಂಡು ಖುಷಿಯಿಂದ ಮುಂದೆ ಹೋಗುತ್ತಾರೆ. ಕೆಲವರು ರಾತ್ರಿ ವೇಳೆ ಫೋಟೋವನ್ನು ನೋಡಿ ಕೇಕೆ ಹಾಕುತ್ತಾರೆ ಎಂದು ರಂಗಸ್ವಾಮಿ ಹೇಳುತ್ತಾರೆ.