ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ.
ಬಸವಾಪುರ ಗ್ರಾಮದ ತಿಮ್ಮಪ್ಪ (58) ಮೃತ ವ್ಯಕ್ತಿಯಾಗಿದ್ದಾರೆ.
ಇಂದು ಬೆಳಗ್ಗೆ ತಮ್ಮ ಮನೆ ಸಮೀಪದ ಕಾಡಿಗೆ ದರಗು ತರಲು ಹೋದ ವೇಳೆ ಈ ಘಟನೆ ನಡೆದಿದೆ.ಕಳೆದ ಕೆಲ ತಿಂಗಳಿಂದ ಈ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು ಅಡಿಕೆ, ಬಾಳೆ, ಕಬ್ಬು ಸೇರಿದಂತೆ ಇನ್ನಿತರ ಬೆಳೆ ಹಾಳು ಮಾಡಿದ್ದವು. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಆನೆ ದಾಳಿ ನಡೆಸುವ ವೇಳೆ ಮೃತ ತಿಮ್ಮಪ್ಪ ಕೂಗಿ ಕೊಂಡಿದ್ದು ಅಲ್ಲೇ ಸಮೀಪದಲ್ಲಿ ದರಗೆಲೆ ಗುಡಿಸುತ್ತಿದ್ದ ಮೂರ್ನಾಲ್ಕು ಮಹಿಳೆಯರು ಏನೆಂದು ನೋಡಿದಾಗ ತಿಮ್ಮಪ್ಪನನ್ನು ಆನೆ ತುಳಿದು ಸಾಯಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಸಂಖ್ಯೆಯ ಬಂಧು-ಬಳಗವನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಭಾರಿ ಸಂಖ್ಯೆಯಲ್ಲಿ ಜನ ಸಮೂಹ ಸೇರಿಕೊಂಡಿದೆ.


