ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.ಶನಿವಾರ ಸಂಜೆ 5.03ಕ್ಕೆ ಅರಮನೆ ಆವರಣದಲ್ಲಿ ಚಾಲನೆ ದೊರಕಿದ ಬಳಿಕ ಜಂಬೂಸವಾರಿ ರಾಜಪಥವನ್ನು ಪ್ರವೇಶಿಸಿದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಅಧಿಕಾರಿಗಳು ಉಪಸ್ಥಿತಿಯ ವೇದಿಕೆಯಲ್ಲಿ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಷನೆ ಸಲ್ಲಿಕೆಯಾಯಿತು. ಈ ಮೂಲಕ ಐದು ಕಿ.ಮಿ ಉದ್ದದ ವಿಶಿಷ್ಟ ಜಂಬೂ ಸವಾರಿಗೆ ಅಭಿಮನ್ಯು ಪಡೆ ಹೆಜ್ಜೆ ಹಾಕಿತು. ಸುಮಾರು ಮೂರು ಗಂಟೆಗಳ ಕಾಲ ಮೆರವಣಿಗೆ ಮುಂದೆ ಸಾಗಿತು.
ಸಿಎಂ ಸಿದ್ದರಾಮಯ್ಯ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಿ ನಂತರ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಒಂದೇ ಬಸ್‌ನಲ್ಲಿ ಅರಮನೆ ಪ್ರವೇಶಿಸಿದರು. ಅಲ್ಲಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜ ಪೂಜೆ ಸಲ್ಲಿಸಿದರು. ಬಳಿಕ ಅರಮನೆ ಆವರಣದಲ್ಲಿ ಆಸೀನರಾಗಿ ಮೆರವಣಿಗೆಯನ್ನು ವೀಕ್ಷಿಸಿದರು. ಮೆರವಣಿಗೆ ಮುಕ್ತಾಯಗೊಂಡ ನಂತರ ವೇದಿಕೆ ಏರಿ ಪುಷ್ಪಾರ್ಚನೆ ಮಾಡಿದರು. ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಡಾ.ಮಹದೇವಪ್ಪ, ಶಿವರಾಜತಂಗಡಗಿ, ಡಿಸಿ ಲಕ್ಷ್ಮಿಕಾಂತರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಕೂಡ ಪುಷ್ಪಾರ್ಚನೆಯಲ್ಲಿ ಭಾಗಿಯಾದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿಂದು ಅರಮನೆಯಿಂದ ಬನ್ನಿಮಂಟಪದವರೆಗೆ 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ, ಆಚಾರ-ವಿಚಾರ, ಭೌಗೋಳಿಕ ಹಿನ್ನೆಲೆ ಹಾಗೂ ಇಲಾಖಾವಾರು, ನಿಗಮ ಮಂಡಳಿ , ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತ 51 ಸ್ತಬ್ಧಚಿತ್ರಗಳ ಪ್ರದರ್ಶನ ಮಾಡಲಾಗುತ್ತಿದೆ.
ಜಂಬೂಸವಾರಿಯನ್ನು ಅರಮನೆಯ ಹೊರಗಿನಿಂದ ವೀಕ್ಷಿಸಲು ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾವಿರಾರು ಮಂದಿ ನೆರೆದಿದ್ದರು. ದೀಪಾಲಂಕಾರಕ್ಕೆಂದು ಅಳವಡಿಸಿದ್ದ ಕಂಬಗಳು, ಕಟೌಟ್‌ಗಳ ಮೇಲೂ ಅಪಾಯ ಲೆಕ್ಕಿಸದೆ ಕುಳಿತಿದ್ದರು.ಆಕರ್ಷಕವಾದ ಸ್ತಬ್ದ ಚಿತ್ರಗಳು, ಪೊಲೀಸ್ ಪಡೆ, ಅಶ್ವಾರೋಹಿ ಪಡೆಗಳೊಂದಿಗೆ, ಮಂಗಳವಾದ್ಯ, ವೀರಗಾಸೆ, ಕತ್ತಿ ವರಸೆ, ನಗಾರಿ, ಡೊಳ್ಳು, ಕಂಸಾಳೆ, ತಾಳಮದ್ದಲೆ, ಪಟ ಕುಣಿತ, ಗೊಂಬೆ ಕುಣಿತ ಸೇರಿದಂತೆ 53 ಜನಪದ ಕಲಾ ತಂಡಗಳ ನೂರಾರು ಕಲಾವಿದರು ನೃತ್ಯ–ನಡಿಗೆಯ ಮೂಲಕ ಕಲೆ–ಸಾಂಸ್ಕೃತಿಕ ವೈಭವವನ್ನು ಸೃಷ್ಟಿಸಿ ಮೆರವಣಿಗೆಯನ್ನು ಮೆರಗುಗೊಳಿಸಿದೆ.
ಬಾರದ ಒಡೆಯರ್
ನವರಾತ್ರಿ ದಿನವೇ ಮಗು ಹುಟ್ಟಿದ ಕಾರಣದಿಂದ ಅಶುಚಿಯಾಗಿದ್ದ ರಾಜವಂಶಸ್ಥರ ಪ್ರತಿನಿಧಿ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಭಾಗಿಯಾಗಲಿಲ್ಲ. ಅವರು ಕಂಕಣಧಾರಿಯಾಗಿಯೇ ಭಾಗವಹಿಸಬಹುದು ಎನ್ನುವ ನಿರೀಕ್ಷೆಇತ್ತು. ಅರಮನೆ ಧಾರ್ಮಿಕ ಚಟುವಟಿಕೆ ಮುಗಿದ ನಂತರ ಕಂಕಣ ವಿಸರ್ಜನೆ ಮಾಡಿದ ಒಡೆಯರ್ ಹತ್ತು ದಿನದ ಸೂತಕದ ಕಾರಣಕ್ಕೆ ವೇದಿಕೆ ಹತ್ತಲಲ್ಲಿ ಎನ್ನಲಾಗಿದೆ.
ಅಭಿಮನ್ಯುಗೆ ಅಲಂಕಾರ
ದಸರಾ ಜಂಬೂ ಸವಾರಿಗೆ ಅರಮನೆ ಅಂಗಳದಲ್ಲಿ ತಯಾರಿಗಳು ನಡೆದವು. ಬೆಳಿಗ್ಗೆಯಿಂದ ಅಭಿಮನ್ಯು ಸಹಿತ ಎಲ್ಲಾ ಆನೆಗಳಿಗೆ ಅಲಂಕಾರ ಮಾಡಲಾಯಿತು. ಒಂಬತ್ತು ಆನೆಗಳಿಗೆ ಕಲಾವಿದರು ಅಲಂಕಾರ ಮಾಡಿದರು. ಆನಂತರ ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ ಅರಮನೆ ಅಂಗಳದಲ್ಲಿ ನೆರವೇರಿತು. ಅಕ್ರಂ ಹಾಗೂ ಸಿಬ್ಬಂದಿಗಳು ಅಂಬಾರಿ ಕಟ್ಟಿದರು. ಸುಮಾರು ಒಂದು ಗಂಟೆ ಕಾಲ ಈ ಕಾರ್ಯ ನಡೆಯಿತು. ಚಾಮುಂಡೇಶ್ವರಿ ವಿಗ್ರಹದೊಂದಿಗೆ ಅಂಬಾರಿ ಹೊತ್ತ ಅಭಿಮನ್ಯು ಜಂಬೂ ಸವಾರಿ ಆರಂಭಿಸಲು ಅಣಿಯಾದ.
ಇನ್ನೇನು ನಂದಿಧ್ವಜ ಪೂಜೆ ಸಲ್ಲಿಸಿ ಜಂಬೂ ಸವಾರಿ ಮೆರವಣಿಗೆ ಸಿಎಂ ಚಾಲನೆ ನೀಡಬೇಕು ಎನ್ನುವಷ್ಟರ ಹೊತ್ತಿಗೆ ಮಳೆ ಶುರುವಾಯಿತು. ಕೆಲ ಹೊತ್ತು ಜೋರಾಗಿ ಸುರಿಯಿತು. ಆಗ ಜನ ಕದಲದೇ ಅಲ್ಲಿಯೇ ಕುಳಿತರು. ಕಲಾವಿದರು ಮಳೆಯಲ್ಲೇ ಹೆಜ್ಜೆ ಹಾಕಿ ಉತ್ಸಾಹ ತುಂಬಿದರು. ಸ್ಥಬ್ದಚಿತ್ರ, ಕಲಾ ತಂಡಗಳು ಮುಂದುವರಿದವು. ಹದಿನೈದು ನಿಮಿಷದ ನಂತರ ಮಳೆ ನಿಂತಿತು. ಮೋಡ ಕವಿದ ಆಹ್ಲಾದಕರ ವಾತಾವರಣದ ನಡುವೆಯೇ ಜಂಬೂ ಸವಾರಿ ಮೆರವಣಿಗೆ ಮುಂದುವರಿಯಿತು. ಚಾಮರಾಜ ವೃತ್ತ, ಕೆಆರ್‌ವೃತ್ತದ ಮೂಲಕ ಅಭಿಮನ್ಯು ಬನ್ನಿಮಂಟಪದ ಕಡೆಗೆ ಹೆಜ್ಜೆ ಹಾಕಿತು. ಬೆಳಿಗ್ಗೆಯಿಂದಲೂ ಜಂಬೂ ಸವಾರಿ ರಸ್ತೆಯುದಕ್ಕೂ ಜನ ಚಾಮುಂಡೇಶ್ವರಿಗೆ ನಮಿಸಿ ಗೌರವಿಸಿದರು.
ಅಭಿಮನ್ಯು ಆನೆ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಹೆಜ್ಜೆ ಹಾಕಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಜಂಬೂಸವಾರಿ ಪೂರ್ಣಗೊಂಡ ನಂತರ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಲಿದೆ.