ಮೈಸೂರು : ಹಿಂದಿನಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಗರದ ರೈಲ್ವೆ ಮೇಲ್ಲೇತುವೆ ಬಳಿ ಇರುವ ಚಾಮುಂಡಿ ಟೌನ್‌ಶಿಪ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಚಾಮರಾಜನಗರ ತಾಲೂಕಿನ ಉದ್ದನೂರಿನ ಶಿವಮೂರ್ತಿ (52), ಹಾಗೂ ಅವರ ಪತ್ನಿ ಚೆನ್ನಾಜಮ್ಮ(46) ಹಾಗೂ ಪುತ್ರ ಸಿದ್ದಾರ್ಥ (15) ಮೃತಪಟ್ಟವರು.ಕಾರ್ಯನಿಮಿತ್ತ ಮೈಸೂರಿಗೆ ತೆರಳಿದ್ದ ಕುಟುಂಬದವರು ಕುಟುಂಬದವರು ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ನಂಜನಗೂಡು ನಗರದ ಪ್ರವೇಶ ದ್ವಾರದ ಬಳಿ ಇರುವ ಚಾಮುಂಡಿ ಟೌನ್‌ಶಿಪ್ ಅವಘಡ ಸಂಭವಿಸಿದೆ.
ಟೌನ್‌ಶಿಪ್ ಮುಂಭಾಗದಲ್ಲಿ ಚಲಿಸುತ್ತಿದ್ದ ವೇಳೆ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಥಳದಲ್ಲೇ ಸಿದ್ದಾರ್ಥ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಶಿವಮೂರ್ತಿ ನಿಧನರಾದರು. ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ಚೆನ್ನಾಜಮ್ಮ ಸಹ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳ ಹಸ್ತಾಂತರ:
ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೀಡಾಗಿರುವ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


