ಮೈಸೂರು : ಚಾಮುಂಡಿ ಬೆಟ್ಟದಿಂದ ಬಂಡಿಪಾಳ್ಯದ ರಸ್ತೆ ಮಾರ್ಗ ಮಧ್ಯೆ ಉತ್ತನಹಳ್ಳಿಗೆ ತೆರಳುವ ರಸ್ತೆಯಲ್ಲಿ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಯಾರೊ ಕಿಡಿಗೇಡಿಗಳು ಧೂಮಪಾನ ಮಾಡಲು ಹೋಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಉರಿ ಬಿಸಿಲಿನಿಂದ ಒಣಗಿ ನಿಂತ ಮರಗಿಡಗಳು ಬೆಂಕಿ ಕೆನ್ನಾಲಿಗೆಗೆ ಬೂದಿಯಾಗಿವೆ. ಗಾಳಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಬೀಸಲಾರಂಭಿಸಿದ ಬಲವಾದ ಗಾಳಿ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿತು, ಇದು ಇತರ ಸ್ಥಳಗಳಿಗೆ ಬೆಂಕಿ ವ್ಯಾಪಿಸಿತು. ಬೇಸಿಗೆ ಆರಂಭವಾಗಿರುವುದರಿಂದ ಕಾಡು ಒಣಗಿದ್ದು ಇದರಿಂದ ಬೆಂಕಿ ಎಕರೆಗಟ್ಟಲೆ ವ್ಯಾಪಿಸಿದೆ ಎಂದು ತಿಳಿದಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದೌಡಹಿಸಿದ್ದು ಹರಸಾಹಸ ಪಡುತ್ತಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ವಿವಿಧ ಗ್ರಾಮಗಳಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಜಾಗೃತಿ ಮೂಡಿಸಲು ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದರೂ, ಅರಣ್ಯ ಪ್ರದೇಶಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರುವ ಕೃತ್ಯ ಅರಣ್ಯಾಧಿಕಾರಿಗಳಿಗೆ ಬೇಸರ ತಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಸತತ ಮೂರು ಗಂಟೆಗಳಿಂದ ನಂದಿಸುತ್ತಿದ್ದರೂ ಬೆಂಕಿ ಆರದೆ ಹತೋಟಿಗೆ ಬಾರದ ಘಟನೆ ನಡೆದಿದೆ. 7 ವಾಹನಗಳು, 60 ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು ಒಂದು ಬದಿ ಬೆಂಕಿ ಹಾರಿಸಿದರೆ ಮತ್ತೊಂದೆಡೆ ಕಿಚ್ಚು ಕಾಣಿಸಿಕೊಳ್ಳುತ್ತಿದ್ದು ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಸಂಪೂರ್ಣ ನಾಶವಾಗಿದೆ ಪದೆ ಪದೇ ಗಾಳಿ ಪಥ ಬದಲಿಸುತ್ತಿರುವುದರಿಂದ ಬೆಂಕಿ ಹಾರಿಸಲು ಕಷ್ಟವಾಗಿದ್ದು ಕುರುಚಲು, ಹುಲ್ಲು, ಸಣ್ಣ ಸಣ್ಣ ಗಿಡಗಳಿಂದಾಗಿ ಬೆಂಕಿ ಹೆಚ್ಚಾಗುತ್ತಿದೆಂದು ಮಾಹಿತಿ ದೊರೆತಿದೆ.