ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಹೊಸ ಇತಿಹಾಸ ನಿರ್ಮಿಸಿದ್ದು 14 ವರ್ಷದ ವೈಭವ್ ಸೂರ್ಯವಂಶಿ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
14 ವರ್ಷದ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆ ಮುರಿದ ಇನ್ನಿಂಗ್ಸ್‌ಗೆ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಪಂದ್ಯದಲ್ಲಿ ವೈಭವ್ 38 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ಆರ್‌ಆರ್ ತಂಡ ಜಿಟಿಯನ್ನು ಎಂಟು ವಿಕೆಟ್‌ಗಳಿಂದ ಸೋಲಿಸಲು ಸಹಾಯ ಮಾಡಿದರು. ಐಪಿಎಲ್‌ನಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಂತರ ಹದಿನೈದು ದಿನಗಳೊಳಗೆ, ವೈಭವ್ ಜಿಟಿ ವಿರುದ್ಧ ಸ್ಫೂರ್ತಿದಾಯಕ ಶತಕದೊಂದಿಗೆ ಹಲವಾರು ದಾಖಲೆಗಳನ್ನು ಮುರಿದರು. ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದ ಅವರ ಶತಕವು ಐಪಿಎಲ್‌ನಲ್ಲಿ ಭಾರತೀಯ ಆಟಗಾರನ ವೇಗದ ಶತಕವಾಗಿದೆ ಮತ್ತು ಸಾರ್ವಕಾಲಿಕ ಎರಡನೇ ವೇಗದ ಶತಕವಾಗಿದೆ, 2013 ರಲ್ಲಿ ಕ್ರಿಸ್ ಗೇಲ್ ಅವರ ಐತಿಹಾಸಿಕ ಇನ್ನಿಂಗ್ಸ್‌ಗಿಂತ ಕೇವಲ ಐದು ಎಸೆತಗಳಲ್ಲಿ ನಿಧಾನವಾಗಿದೆ.
ಈ ಶತಕದೊಂದಿಗೆ ಐಪಿಎಲ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಐಪಿಎಲ್‌ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ವಿಜಯ್ ಝೋಲ್ ಹೆಸರಿನಲ್ಲಿತ್ತು. 2013 ರಲ್ಲಿ ನಡೆದ ಮುಂಬೈ ವಿರುದ್ಧದ ಟಿ20 ಪಂದ್ಯದಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ 18 ವರ್ಷದ ಝೋಲ್ ಭರ್ಜರಿ ಸೆಂಚುರಿ ಸಿಡಿಸಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ವೈಭವ್ ಯಶಸ್ವಿಯಾಗಿದ್ದಾರೆ.
ಈ ಮೂಲಕ 14ನೇ ವಯಸ್ಸಿನಲ್ಲಿ ಸೆಂಚುರಿ ಸಿಡಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಹಾಗೂ 15 ವಯಸ್ಸಿನೊಳಗೆ 20 ಸೆಂಚುರಿ ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಕ್ರಿಸ್ ಗೇಲ್ (30 ಎಸೆತಗಳು) ಬಳಿಕ ಅತೀ ವೇಗದ ಶತಕ ಸಿಡಿಸಿದ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಯೂಸುಫ್ ಪಠಾಣ್ ಹೆಸರಿನಲ್ಲಿತ್ತು. 2010 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಪಠಾಣ್ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿದು ವೈಭವ್ ಸೂರ್ಯವಂಶಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
209 ರನ್ ಕಲೆಹಾಕಿದ ಗುಜರಾತ್
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 209 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಸಾಯಿ ಸುದರ್ಶನ್ 30 ಎಸೆತಗಳಲ್ಲಿ 39 ರನ್ ಗಳಿಸಿದರು. ಇವಲ್ಲದೆ, ನಾಯಕ ಶುಭ್ಮನ್ ಗಿಲ್ ಕೂಡ 50 ಎಸೆತಗಳಲ್ಲಿ 84 ರನ್‌ಗಳ ಇನ್ನಿಂಗ್ಸ್ ಆಡಿದರು. ಇನ್ನು ಕಳೆದ ಸೀಸನ್ವರೆಗೂ ರಾಜಸ್ಥಾನ್ ಪರ ಆಡುತ್ತಿದ್ದ ಜೋಸ್ ಬಟ್ಲರ್, ಈ ಬಾರಿ ಅದೇ ತಂಡದ ವಿರುದ್ಧ ಕೇವಲ 26 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಮೂವರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ, ಗುಜರಾತ್ ತಂಡದ ಬೇರೆ ಯಾವುದೇ ಆಟಗಾರನು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ.
ವೈಭವ್- ಜೈಸ್ವಾಲ್ ಬಿರುಗಾಳಿ
210 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ಗೆ ವೈಭವ್ ಸೂರ್ಯವಂಶಿ ಹಿಂದೇದೂ ಸಿಕ್ಕಿರದ ಆರಂಭ ಒದಗಿಸಿಕೊಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದ ವೈಭವ್ ಮೊದಲ 17 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ಇದಾದ ನಂತರ ಕೇವಲ 35 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಅವರು ಯೂಸುಫ್ ಪಠಾಣ್ ಅವರ ದಾಖಲೆಯನ್ನು ಮುರಿದರು.