ಮುಂಬೈ : ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಕಾರಣಗಳಿಂದಲೂ ಸೈಫ್ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಎಲ್ಲೆ ಹೋದರೂ ಕೂಡ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇದರಿಂದ ಕೆಲವೊಮ್ಮೆ ಅವರಿಗೆ ಕಿರಿಕಿರಿ ಉಂಟಾಗುತ್ತದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಇಲ್ಲಿದೆ. ಸೈಫ್ ಅಲಿ ಖಾನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಓರ್ವ ವ್ಯಕ್ತಿಯಿಂದಾಗಿ ಅವರು ಜಾರಿ ಬೀಳಬಹುದಾದ ಸಂದರ್ಭ ಎದುರಾಗಿದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕಟ್ಟಡವೊಂದರ ಪಾರ್ಕಿಂಗ್ ಜಾಗದಲ್ಲಿ ಸೈಫ್ ಅಲಿ ಖಾನ್ ನಡೆದುಕೊಂಡು ಬರುವಾಗ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳ ಮುಗಿಬಿದ್ದಿದ್ದಾರೆ. ಸೈಫ್ ಜೊತೆ ಅವರ ಬಾಡಿ ಗಾರ್ಡ್ಸ್ ಕೂಡ ಇದ್ದರು. ಹಾಗಿದ್ದರೂ ಕೂಡ ಸೆಲ್ಫಿ ಪಡೆಯಲು ಕೆಲವರು ನೂಕು ನುಗ್ಗಲು ಮಾಡಿದರು. ಮಾತನಾಡುತ್ತಲೇ ನಡೆದುಬರುವಾಗ ಒಬ್ಬ ಅಭಿಮಾನಿ ಅಡ್ಡ ಬಂದಿದ್ದಾನೆ. ಇದರಿಂದ ಸೈಫ್ ಅಲಿ ಖಾನ್ ಎಡವಿದ್ದಾರೆ. ಪುಣ್ಯಕ್ಕೆ ಅವರು ನೆಲದ ಮೇಲೆ ಬಿದ್ದಿಲ್ಲ. ‘ಹುಷಾರು..’ ಎಂದು ಹೇಳುತ್ತಲೇ ಅವರು ಮುಂದೆ ಸಾಗಿದ್ದಾರೆ. ಸೈಫ್ ಅಲ್ಲದೇ ಈ ಜಾಗದಲ್ಲಿ ಬೇರೆ ಯಾವುದಾದರೂ ಸೆಲೆಬ್ರಿಟಿ ಇದ್ದಿದ್ದರೆ ಕೋಪ ಮಾಡಿಕೊಳ್ಳುವ ಸಾಧ್ಯತೆ ಇತ್ತು. ಆದರೆ ಸೈಫ್ ಹಾಗೆ ಮಾಡಿಲ್ಲ. ಕೂಲ್ ಆಗಿಯೇ ಅವರು ನಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳ ಜೊತೆ ಅಭಿಮಾನಿಗಳು ಹುಷಾರಾಗಿ ನಡೆದುಕೊಳ್ಳಬೇಕು. ಅವರಿಗೆ ಕಿರಿಕಿರಿ ಆಗುವಂತೆ ಮುಗಿಬೀಳಬಾರದು ಎಂದು ಅನೇಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಹಿಂದೆ ಕೂಡ ಇಂಥ ಘಟನೆಗಳು ಆಗಿದ್ದುಂಟು. ಸಾಮಾನ್ಯವಾಗಿ ಸೈಫ್ ಅಲಿ ಖಾನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಪಾಪರಾಜಿಗಳು ಇದ್ದಾಗ ಅಲ್ಲಿಂದ ಬೇಗ ಅವರು ಕಾಲು ಕೀಳುತ್ತಾರೆ. ಅನಗತ್ಯ ತಲೆಬಿಸಿ ಬೇಡ ಎಂಬ ಕಾರಣಕ್ಕೆ ಅವರು ಸೋಶಿಯಲ್ ಮೀಡಿಯಾ ಕೂಡ ಬಳಸುವುದಿಲ್ಲ. ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಈ ವರ್ಷ ತೆರೆಕಂಡ ‘ಆದಿಪುರುಷ್’ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದರು. ಆದರೆ ಆ ಪಾತ್ರದ ವೇಷ-ಭೂಷಣ ಮತ್ತು ಡೈಲಾಗ್ ಸೂಕ್ತವಾಗಿ ಇರಲಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು.