ಮುಂಬೈ ; 2013 ರಲ್ಲಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನ್ಯಾಯಾಲಯ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮೂವರನ್ನು ಆರೋಪ ಮುಕ್ತಗೊಳಿಸಿದೆ.
ಸಚಿನ್ ಅಂದುರೆ ಮತ್ತು ಶರದ್‌ಕಲಾಸ್ಕರ್ ಅವರುಗಳೇ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆರೋಪಿಗಳಾಗಿದ್ದಾರೆ. ಪುಣೆ ವಿಶೇಷ ನ್ಯಾಯಾಲಯ ಈ ಇಬ್ಬರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.ಈ ಇಬ್ಬರು 2013ರ ಆ.20 ರಂದು ಪುಣೆಯಲ್ಲಿ ಬೈಕ್‌ನಲ್ಲಿ ಬಂದು ಡಾ.ನರೇಂದ್ರ ದಾಬೋಲ್ಕರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. 2021 ರ ಸೆ.15 ರಂದು ವಿಶೇಷ ನ್ಯಾಯಾಲಯ ಐವರು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮೂಢನಂಬಿಕೆ ವಿರೋಧಿ, ಹೋರಾಟಗಾರ ಡಾ.ನರೇಂದ್ರ ದಾಬೋಲ್ಕರ್ ಅವರ ಹತ್ಯೆ ಪ್ರಕರಣದ ವಿಚಾರಣೆಯನ್ನು ಪುಣೆಯ ವಿಶೇಷ ನ್ಯಾಯಾಲಯ ಕೈಗೆತ್ತಿಕೊಂಡಿತ್ತು.
ಈ ಪ್ರಕರಣದ ತನಿಖೆಯನ್ನು ಪುಣೆ ನಗರ ಪೊಲೀಸರಿಂದ 2014ರ ಜೂನ್‌ನಲ್ಲಿ ಸಿಬಿಐ ವಹಿಸಿಕೊಂಡಿತ್ತು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಯುಎಪಿಎ ಅಡಿ ಪ್ರಕರಣಗಳ ವಿಶೇಷ ನ್ಯಾಯಾಲಯದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಸೆಷೆನ್ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಪಿ ಜಾಧವ್ಅ ವರು ವಿಚಾರಣೆ ನಂತರ ಮೇ 10 ರಂದು ಪ್ರಕರಣದ ತೀರ್ಪು ಪ್ರಕಟಿಸಲು ತೀರ್ಮಾನಿಸಿದ್ದರು. ಅದರಂತೆ ಇಂದು ತೀರ್ಪು ಹೊರ ಬಿದ್ದಿದ್ದು, ಇಬ್ಬರು ಅಪರಾಧಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.