ಮುಂಬೈ/ ಮಂಗಳೂರು : ಮುಂಬೈ ಮತ್ತು ಉಡುಪಿ ನಗರಗಳು ಒಂದು ಜನಪದ ನಾಟಕ ಪ್ರದರ್ಶನಕ್ಕೆ ಸಾಕ್ಷಿಯಾದವು. ಒಂದೇ ಸಮಯದಲ್ಲಿ, ಒಂದೇ ನಾಟಕವನ್ನು ಎರಡು ನಗರಗಳಲ್ಲಿ ಪ್ರದರ್ಶಿಸುವ ಮೂಲಕ ನಾಟಕ ರಂಗದಲ್ಲಿ ಹೊಸ ದಾಖಲೆ ಬರೆದಂತಾಗಿದೆ. ಈ ಅಪರೂಪದ ಪ್ರಯತ್ನವನ್ನು ಮಂಗಳೂರಿನ ಪ್ರಸಿದ್ಧ ನಾಟಕ ತಂಡ ಸಾಯಿಶಕ್ತಿ ಕಲಾಬಳಗ ನಡೆಸಿದ್ದು, ನಾಟಕಾಭಿಮಾನಿಗಳಿಗೆ ವಿಶೇಷ ಅನುಭವವನ್ನು ನೀಡಿದೆ.
ಮಂಗಳೂರಿನ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ ಶ್ರೀಮತಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್ ಇವರ ಸಾರಥ್ಯ ದ ಸಾಯಿಶಕ್ತಿ ಕಲಾಬಳಗದ ಕಲಾವಿದರು ಅರ್ಪಣೆ ಗೈದ “ ಜೋಡು ಜೀಟಿಗೆ “ ಅದ್ಧೂರಿ ತುಳು ಜನಪದ ನಾಟಕದ ಅಭೂತಪೂರ್ವ ಪ್ರದರ್ಶನ ಒಂದೇ ಸಮಯದಲ್ಲಿ, ಒಂದೇ ದಿನ ಎರಡು ಬೇರೆ ಬೇರೆ ನಗರದ ವೇದಿಕೆಗಳಲ್ಲಿ ನಡೆಸಿ ಇತಿಹಾಸ ಸೃಷ್ಟಿ ಮಾಡಿದೆ. ಉಡುಪಿ ಮತ್ತು ಮುಂಬಯಿ ಮಹಾನಗರಿಯ ವಿಶ್ವ ಬಂಟರ ಸಮಾಗಮದ ವೇದಿಕೆಯಲ್ಲಿ ಪ್ರಖ್ಯಾತ ಕಲಾವಿದರ ಬಳಗದಿಂದ ಏಕಕಾಲದಲ್ಲಿ ಪ್ರದರ್ಶನಗೊಂಡಿತು. ನಾಟಕದ ಪ್ರತಿಯೊಂದು ದೃಶ್ಯಕೂಟ ಮತ್ತು ಸಂಭಾಷಣೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದವು.
ಸುಮಾರು 90 ವರ್ಷಗಳ ಇತಿಹಾಸವಿರುವ ತುಳು ರಂಗ ಭೂಮಿ ಹಲವು ಮಜಲುಗಳನ್ನು ದಾಟಿ ಬಂದಿದೆ. ಆಯಾ ಕಾಲಮಾನಗಳಲ್ಲಿ ಹೊಸತನ್ನು ಅಳವಡಿಸಿಕೊಂಡು, ಹೊಸ ಎಗ್ಗೆಗಳನ್ನು ಚಾಚಿ ತನ್ನದೇ ಆದ ಛಾಪು ಮೂಡಿಸಿಕೊಂಡು ಬಂದಿದೆ.ತುಳು ನಾಟಕ ರಂಗದ ಹೊಸ ಶಕೆಗೆ ಕಾರಣವಾಗಿದ್ದು ತಂತ್ರಜ್ಞಾನದ ಬಳಕೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ರಂಗಸಜ್ಜಿಕೆಯಲ್ಲಿ ಹೊಸತನವನ್ನು ತಂದ ಮಂಗಳೂರಿನ ಹೆಸರಾಂತ ತಂಡ ಶ್ರೀಮತಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್ ನೇತೃತ್ವದ ಸಾಯಿಶಕ್ತಿ ಕಲಾಬಳಗದ ಬೊಳ್ಳಿ ಮಲೆತ ಶಿವಶಕ್ತಿಲು ನಾಟಕದೊಂದಿಗೆ ಮತ್ತೆ ನಾಟಕಕ್ಕೆ ಜನ ಸೇರುವಂತೆ ಆಗಿದೆ. ಇದೀಗ ಇದೇ ತಂಡ ಮತ್ತೊಂದು ಅವಿಸ್ಮರಣೀಯ ನಾಟಕದೊಂದಿಗೆ ಮುಂಬಯಿ ಮತ್ತು ಉಡುಪಿಯ ಜನರನ್ನು ಮುದಗೊಳಿಸಿದ್ದಾರೆ.
ದೈವದಹುಟ್ಟಿನ ಪೌರಾಣಿಕ ಹಿನ್ನೆಲೆ, ಬೀರ ಕಾಳಮ್ಮನ ಭೇಟಿ , ಕಲ್ಕುಡ ಕಲ್ಲುರ್ಟಿ ಯ ಹುಟ್ಟು , ನಾಲ್ಕೈತಾಯ ದೈವದ ಭೇಟಿ , ಕಾರಣಿಕಗಳ ಪ್ರದರ್ಶನ, ಇತ್ಯಾದಿ ದೃಶ್ಯಗಳು ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತವೆ.
ನವ್ಯ, ಪೌರಾಣಿಕ ಅದ್ದೂರಿ ದೃಶ್ಯ ಸಂಯೋಜನೆಯ ಶಕ್ತಿ ಪೌರಾಣಿಕ ದೇವ, ದೇವತೆಗಳ, ಕತೆಗಳು ನಾಟಕ ರೂಪದಲ್ಲಿ ಮೂಡಿ ಬಂದು ವೇದಿಕೆಗಳಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಳ್ಳುವುದು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುತ್ತದೆ. ಆದರೆ ತುಳುನಾಡಿನ ಆರಾಧ್ಯ ದೈವಗಳ ಅದ್ದೂರಿಯ ನಾಟಕ ಪ್ರದರ್ಶನವಾಗುವುದು ಬಹಳ ಕಡಿಮೆ. ಈಗ ಶ್ರೀಮತಿ ಲಾವಣ್ಯ ವಿಶ್ವಾಸ್ ಕುಮಾರ್ ದಾಸ್ ಅವರು ತಮ್ಮ “ಜೋಡು ಜೀಟಿಗೆ’ ನಾಟಕದ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ. ಗೋಪುರ, ಬೀದಿ, ಅರಮನೆ, ಕಾಡು, ಗೊಮ್ಮಟ ಬೆಟ್ಟ , ಪುರಾತನ ಕಾಲದ ಮನೆ, ದೈವಸ್ಥಾನ ಇತ್ಯಾದಿ ದೃಶ್ಯಾವಳಿಗಳನ್ನು ಕಾಯುವ ಅವಕಾಶವನ್ನೇ ಕೊಡದೆ ಒಂದೆರಡು ನಿಮಿಷಗಳಲ್ಲಿಯೇ ಬದಲಿಸಿ ಬಿಡುವ ಕೈ ಚಳಕ ಅದ್ಭುತ. ನವ್ಯ ಮತ್ತು ಪೌರಾಣಿಕ ನಾಟಕದ ದೃಶ್ಯ ಸಂಯೋಜನೆಯ ಸಮ್ಮಿಲನ ಮನಮೋಹಕವಾಗಿದೆ.
ಸರಿ ಸುಮಾರು ೫೦ ಕ್ಕೂ ಹೆಚ್ಚು ಕಲಾವಿದರು ನಾಟಕದಲ್ಲಿ ಬಣ್ಣ ಹಚ್ಚಿದ್ದು ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ . ಶ್ರೀಯುತ ಕೀರ್ತನ್ ಭಂಡಾರಿ ಕುಳಾಯಿ ಇವರ ಸಾಹಿತ್ಯ ಮತ್ತು ರಚನೆಯಲ್ಲಿ ನಾಟಕ ಅದ್ಭುತವಾಗಿ ಮೂಡಿ ಬಂದಿದೆ . ಗೌರವ್ ಶೆಟ್ಟಿಗಾರ್ ಮಠಕಣಿ ಇವರ ಸಮಗ್ರ ನಿರ್ವಹಣೆಯಲ್ಲಿ , ಗಗನ್ ಸುವರ್ಣ ಮುಲ್ಕಿ ಇವರ ಬೆಳಕಿನ ನಿರ್ವಹಣೆ, ಮುಖೇಶ್ ಸೂಟರ್ಪೇಟೆ ಮತ್ತು ವಿಶಾಲ್ ರಾಜ್ ಕೋಕಿಲ ಇವರ ಸಂಗೀತ ನಿರ್ವಹಣೆಯೂ ಅಚ್ಚುಕಟ್ಟಾಗಿದೆ. ಬಿಎಸ್ ಕಾರಂತ್ ಇಂಚರ ಇವರ ಹಿನ್ನೆಲೆ ಸಂಗೀತ ನಾಟಕಕ್ಕೆ ಇನ್ನಷ್ಟು ಮೆರುಗು ನೀಡಿದೆ. ಒಟ್ಟಿನಲ್ಲಿ ಹೇಳುವುದಾದರೆ ‘ಜೋಡು ಜೀಟಿಗೆ’ ನಾಟಕವು ತುಳು ರಂಗಭೂಮಿಗೆ ಒಂದು ಅಮೂಲ್ಯವಾದ ಕೊಡುಗೆಯಾಗಿದೆ. ಉತ್ತಮವಾದ ಕಥಾ ಹಂದರ, ಅಪ್ಪಟ ತುಳುವಿನ ಕಥಾ ಸಂಭಾಷಣೆ, ಸುಂದರವಾದ ರಂಗ ವಿನ್ಯಾಸ, ಪಾತ್ರಗಳ ಸಂಭಾಷಣೆಯ ಉತ್ತಮವಾದ ಧ್ವನಿ ಮುದ್ರಣ, ಪ್ರಬುದ್ಧ ಕಲಾವಿದರ ಮನೋಜ್ಞ ಅಭಿನಯದ ಮೂಲಕ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾದ ಈ ತಂಡವು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿಸುವ ಎಲ್ಲಾ ತಂಡಗಳಿಗೂ ಈ ತಂಡ ಈಗ ಅಗ್ರಸ್ಥಾನದಲ್ಲಿದೆ.
ಸಮಯ ನಿರ್ವಹಣೆಯ ಮೆಚ್ಚುಗೆ
ಒಂದೇ ಸಮಯದಲ್ಲಿ ಎರಡು ನಗರಗಳಲ್ಲಿ ಪ್ರದರ್ಶನ ನೀಡುವುದು ತಾಂತ್ರಿಕವಾಗಿ ಸವಾಲಿನ ಕೆಲಸ. ಆದರೆ ತಂಡದ ಸಾರಥಿ ಹಾಗೂ ಸದಸ್ಯರು ಉತ್ತಮ ತಂತ್ರಜ್ಞಾನ, ಸಮಯ ನಿಯಂತ್ರಣ, ಮತ್ತು ಕಲಾವಿದರ ಹೊಂದಾಣಿಕೆಯಿಂದ ನಾಟಕವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಪ್ರೇಕ್ಷಕರಿಗೆ ಯಾವುದೇ ಅಡಚಣೆ ಆಗದೇ, ನಾಟಕದ ಗತಿಯು ನಿರಂತರವಾಗಿತ್ತು.
ಪ್ರೇಕ್ಷಕರ ಪ್ರತಿಕ್ರಿಯೆ
ಮುಂಬೈನ ನಾಟಕವನ್ನು ವೀಕ್ಷಿಸಿದ ಪ್ರೇಕ್ಷಕರಲ್ಲಿ ಕೆಲವರು, “ನಾಟಕದ ಆಯ್ಕೆಯೂ ಅಷ್ಟೇ ಅದ್ಭುತ, ಪ್ರದರ್ಶನದ ಗುಣಮಟ್ಟವೂ ಹೀಗೆಯೇ ಪ್ರಭಾವಶಾಲಿ” ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿಯ ಪ್ರೇಕ್ಷಕರು ಕೂಡ “ಇದು ನಮ್ಮ ಕಲಾ ಕ್ಷೇತ್ರಕ್ಕೆ ಹೊಸ ದಾರಿಯ ಉದಾಹರಣೆ” ಎಂದರು.
ಸಂಘಟಕರ ಮಾತು
ಈ ಪ್ರದರ್ಶನದ ಪ್ರಯೋಗದ ಹಿಂದೆ, ನಾಟಕ ತಂಡದ ಉದ್ದೇಶ ಪ್ರತಿ ಸ್ಥಳದಲ್ಲಿಯೂ ಪ್ರೇಕ್ಷಕರಿಗೆ ನಾಟಕದ ಅನುಭವವನ್ನು ಸಮನಾಗಿ ತಲುಪಿಸುವುದು. ಸಂಘಟಕರ ಪ್ರಕಾರ, “ಇದು ಹೊಸ ಪ್ರಯತ್ನ. ನಮ್ಮ ಉತ್ಸಾಹ ಮತ್ತು ಪ್ರೇಕ್ಷಕರ ಬೆಂಬಲದಿಂದ ನಾಟಕವೊಂದು ಏಕಕಾಲದಲ್ಲಿ ಎರಡು ಸ್ಥಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುವುದಕ್ಕೆ ಅವಕಾಶವಾಯಿತು ಎಂದರು.
ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ
ನಾಟಕ ಪ್ರಪಂಚದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯೋಗ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಇನ್ನಷ್ಟು ನಾಟಕಗಳನ್ನು ನಿರೀಕ್ಷಿಸಬಹುದೆಂದು ಕಲಾ ಲೋಕದವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ನಾಟಕ ಕ್ಷೇತ್ರದ ದೀರ್ಘಾವಧಿಯ ಬದಲಾವಣೆಯ ಮೊದಲ ಹೆಜ್ಜೆ ಎಂದು ಕರೆಯಬಹುದು.