ಮುಂಬೈ : ಅಮೇರಿಕನ್ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಕಂಪನಿಯು ಜುಲೈ 15 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿ ತನ್ನ ಮೊದಲ ಶೋರೂಂ ತೆರೆಯಲಿದೆ. ಕಂಪನಿಯು ಇದರ ಅಧಿಕೃತ ಘೋಷಣೆ ಮಾಡಿದೆ.
ಆದರೆ ಅದಕ್ಕೂ ಮೊದಲು ವಿದ್ಯುತ್ ವಾಹನ ದೈತ್ಯ ಟೆಸ್ಲಾ ಶುಕ್ರವಾರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ವಾಹನಗಳನ್ನು ಪ್ರದರ್ಶಿಸಲು, ಪರೀಕ್ಷಾ ಚಾಲನೆಗೆ ಅವಕಾಶ ನೀಡಲು ಮತ್ತು ತನ್ನ ಕಾರುಗಳನ್ನು ಮಾರಾಟ ಮಾಡಲು ಅನುಮತಿ ಪಡೆದಿದೆ.
ಅಂಧೇರಿ ಆರ್ ಟಿ ಓ ಕಚೇರಿ ಜಾಗತಿಕ ವಿದ್ಯುತ್ ವಾಹನ ದೈತ್ಯ ಕಂಪನಿಗೆ ವ್ಯಾಪಾರ ಪ್ರಮಾಣಪತ್ರವನ್ನು ಔಪಚಾರಿಕವಾಗಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲಾನ್ ಮಸ್ಕ್ ನೇತೃತ್ವದ ಕಂಪನಿಯ ಭಾರತೀಯ ಅಂಗವಾದ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್‌ಗೆ ಮೋಟಾರ್ ವಾಹನ ಕಾಯ್ದೆಯಡಿ ವ್ಯಾಪಾರ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ಹಿರಿಯ ಆರ್ ಟಿ ಓ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮಾಣಪತ್ರವನ್ನು ನೀಡುವ ಮೊದಲು, ಮೋಟಾರ್ ವಾಹನ ನಿರೀಕ್ಷಕರು ಕಂಪನಿಯ ಅರ್ಜಿಯಲ್ಲಿ ಉಲ್ಲೇಖಿಸಲಾದ ಶೋ ರೂಂ, ಪಾರ್ಕಿಂಗ್ ಮತ್ತು ಗೋದಾಮು ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ. ಈ ವಾರದ ಆರಂಭದಲ್ಲಿ ಡೀಲರ್‌ಶಿಪ್ ನೋಂದಣಿಗೆ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಅಂಧೇರಿ ಆರ್ ಟಿ ಓನ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಮೋಟಾರು ವಾಹನ ನಿಯಮಗಳ ಸೆಕ್ಷನ್ 35 ರ ಅಡಿಯಲ್ಲಿ ವ್ಯಾಪಾರ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಮತ್ತು ಕೆಲವು ಷರತ್ತುಗಳ ಅಡಿಯಲ್ಲಿ ನೋಂದಾಯಿಸದ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಚಲಿಸಲು ಅಧಿಕಾರ ನೀಡುತ್ತದೆ. ಪ್ರಮಾಣಪತ್ರವು ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.