ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದೆಯನ್ನು ಕೊನೆಗೂ ಸೆರೆಹಿಡಿಯುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಿಜೋಯ್ ದಾಸ್ ಎನ್ನುವ ಸುಳ್ಳು ಹೆಸರಿನಿಂದ ವಾಸಿಸುತ್ತಿದ್ದ ಈತ ಥಾಣೆಯ ನಿರ್ಜನ ರಸ್ತೆಯ ಪೊದೆಯೊಂದರಲ್ಲಿ ಅವಿತುಕೊAಡಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಪತ್ತೆ ಹಚ್ಚಿದ್ದು ಹೇಗೆ?
ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ದಾಳಿ ಮಾಡಿದ ನಂತರ ಆರೋಪಿಯು ಕಟ್ಟಡದಿಂದ ಹೊರಹೋಗುವುದನ್ನು ಅಲ್ಲಿನ ಸಿಸಿಟಿವಿ ಮೂಲಕ ಪೊಲೀಸರು ಗಮನಿಸಿದ್ದಾರೆ. ಆನಂತರ ಆತನನ್ನು ಪತ್ತೆ ಹಚ್ಚಲು ನಗರದಾದ್ಯಂತ ಹಲವಾರು ಗಂಟೆಗಳ ಕಾಲ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಅಂಧೇರಿಯಲ್ಲಿ ಆತ ಬೈಕ್‌ನಿಂದ ಇಳಿದು ಹೋಗುತ್ತಿದ್ದುದ್ದು ಪತ್ತೆಯಾಗಿದೆ. ಹೀಗಾಗಿ ಆ ದ್ವಿಚಕ್ರವಾಹನದ ನಂಬ್ರ ಬಳಸಿ ಆರೋಪಿಯು ವರ್ಲಿಯಲ್ಲಿ ವಾಸವಿದ್ದ ಬಾಡಿಗೆ ಮನೆಯನ್ನು ಪೊಲೀಸರು ಗುರುತಿಸಿದ್ದಾರೆ. ಆ ಮನೆಯಲ್ಲಿ ಆತನ ಜೊತೆಗಿದ್ದ ಅನ್ಯ ಮೂವರನ್ನು ವಿಚಾರಣೆ ನಡೆಸಿ ಆತನ ಮೊಬೈಲ್ ಸಂಖ್ಯೆ ಪಡೆದಿದ್ದಾರೆ. ಆ ಮೂಲಕ ಆತ ಇರುವ ಸ್ಥಳವನ್ನು ಪತ್ತೆ ಹಚ್ಚಿರುವುದಲ್ಲದೆ, ಎಲ್ಲಾ ಕಡೆಗಳಿಂದಲೂ ಸುತ್ತುವರಿದು ಬಂಧಿಸಿದ್ದಾರೆ.
ಸೈಫ್ ಮನೆಗೆ ನುಗ್ಗಿದ ಘಟನೆ ಟಿವಿಗಳಲ್ಲಿ ಬಿತ್ತರಿಸುತ್ತಿದ್ದುದರಿಂದ ಆಪಾದಿತನು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಥಾಣೆಗೆ ಓಡಿಹೋಗಿ ಅಲ್ಲಿ ಕಾರ್ಮಿಕ ಶಿಬಿರದ ಬಳಿ ಅವಿತುಕೊಂಡಿದ್ದಾನೆ. ಆಪಾದಿತನಿಗೆ ತಾನು ಸೈಫ್ ಅಲಿ ಖಾನ್ ಮನೆಗೆ ನುಗ್ಗಿರುವುದರ ಅರಿವಿರಲಿಲ್ಲ. ಆದರೂ ಅಲ್ಲಿ ಭಾರಿ ದೊಡ್ಡ ಮೊತ್ತದ ದರೋಡೆಗೆ ಪ್ರಯತ್ನಿಸಿದ್ದಾನೆ.ಕಟ್ಟಡದ ಒಳಗೆ ಪ್ರವೇಶಿಸಲು ಹಿಂಬದಿಯ ಮೆಟ್ಟಿಲು ಹಾಗೂ ಹವಾನಿಯಂತ್ರಿತ ನಳಗಳನ್ನು ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೊಳಗಾದ ಆರೋಪಿ ಶೆಹಜಾದೆಯನ್ನು ಹೆಚ್ಚಿನ ತನಿಖೆಗೊಳಪಡಿಸಲು ನ್ಯಾಯಾಲಯ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.