ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಅತಿ ಹೆಚ್ಚು ಬಾರಿ ಆಡಿದ ಆಟಗಾರ ಮತ್ತು ಅತಿ ರನ್ ಸ್ಕೋರರ್ ಆಗಿರುವ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಮುಂದಿನ ವರ್ಷದ ಮೆಗಾ ಹರಾಜಿನ ಮೊದಲು ಫ್ರಾಂಚೈಸಿ ತೊರೆಯಲಿದ್ದಾರೆ ಎಂದು ವರದಿಯಾಗಿದೆ.
ಶನಿವಾರ, ಜುಲೈ 20ರಂದು ದೈನಿಕ್ ಜಾಗರಣ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಐಪಿಎಲ್ 2024ರಲ್ಲಿ ತಂಡವನ್ನು ಮುನ್ನಡೆಸಿದ ರಿಷಭ್ ಪಂತ್ ಅವರೊಂದಿಗೆ ಸಂತೋಷವಾಗಿಲ್ಲ ಮತ್ತು ಸ್ಟಾರ್ ಕ್ರಿಕೆಟಿಗನನ್ನು ಉಳಿಸಿಕೊಳ್ಳಬೇಕೆ ಅಥವಾ ಕೈ ಬಿಡಬೇಕೆ ಎಂಬ ನಿರ್ಧಾರದ ಬಗ್ಗೆ ಇನ್ನೂ ಯೋಚಿಸುತ್ತಿದೆ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತೊರೆಯಬಹುದು ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ಆದಾಗ್ಯೂ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರ ಬೆಂಬಲದ ಹೊರತಾಗಿಯೂ, ಮುಂಬರುವ ಮೆಗಾ ಹರಾಜಿಗೆ ಮುಂಚಿತವಾಗಿ ರಿಷಭ್ ಪಂತ್‌ರನ್ನು ಉಳಿಸಿಕೊಳ್ಳುವುದಿಲ್ಲ ಎಂದು ವರದಿ ಹೇಳಿದೆ.
ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದರೆ, ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಸೇರಬಹುದು ಎನ್ನಲಾಗುತ್ತಿದೆ.
ಎಂಎಸ್ ಧೋನಿ ಮುಂದಿನ ದಿನಗಳಲ್ಲಿ ಐಪಿಎಲ್‌ನಿಂದ ನಿವೃತ್ತಿ ಹೊಂದಲಿರುವುದರಿಂದ, ಸಿಎಸ್‌ಕೆ ಫ್ರಾಂಚೈಸಿಯು ಭಾರತೀಯ ವಿಕೆಟ್-ಕೀಪರ್-ಬ್ಯಾಟರ್‌ನ ಹುಡುಕಾಟದಲ್ಲಿದೆ ಮತ್ತು ರಿಷಭ್ ಪಂತ್‌ನಂತಹ ಪ್ರತಿಭಾವಂತ ಆಟಗಾರನೊಂದಿಗೆ ಸಹಿ ಮಾಡಲು ಹೆಚ್ಚು ಆಸಕ್ತಿ ವಹಿಸಿದ್ದಾರೆ.