ಮುಂಬೈ : ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ನೂತನ ಕೋಚ್ ಗೌತಮ್ ಗಂಭೀರ್ ಅವರಿಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.ರಾಹುಲ್ ದ್ರಾವಿಡ್ ಮಾರ್ಗದರ್ಶನದ ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಇದೀಗ ಈ ಲೆಗಸಿಯನ್ನು ಮುಂದುವರಿಸಿ ಮತ್ತಷ್ಟು ಟ್ರೋಫಿ ಕೈವಶ ಮಾಡಲು ಟೀಂ ಇಂಡಿಯಾ ನೂತನ ಕೋಚ್ ಜವಾಬ್ದಾರಿ ಯಾರು ವಹಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದ ರಾಹುಲ್ ದ್ರಾವಿಡ್ ಅವರ ಅವಧಿ 2024ರ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಅಂತ್ಯವಾಗಿದೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿದೆ.ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ನೇಮಕ ಮಾಡಿತ್ತು. ಲಕ್ಷ್ಮಣ್ ನೇತೃತ್ವದ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ದ ಪಂದ್ಯ ಆಡುತ್ತಿದೆ. ಇದೀಗ ಬಿಸಿಸಿಐ ಹಲವು ಸುತ್ತಿನ ಸಂದರ್ಶನದ ಬಳಿಕ ಗೌತಮ್ ಗಂಭೀರ್ಗೆ ನೂತನ ಕೋಚ್ ಪಟ್ಟ ಕಟ್ಟಿದೆ.
ಟೀಮ್ ಇಂಡಿಯಾದ ಮುಖ್ಯ ಕೋಚ್ ಆದ ಬೆನ್ನಲ್ಲೇ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ. ಭಾರತ ಎಂಬುದು ನನ್ನ ಅಸ್ತಿತ್ವ. ದೇಶ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನನ್ನ ಜೀವನದ ಅತಿದೊಡ್ಡ ಅವಕಾಶ. ಭಾರತ ಕ್ರಿಕೆಟ್ ತಂಡಕ್ಕೆ ವಿಭಿನ್ನ ರೋಲ್ನಲ್ಲಿ ಮರಳಿರುವುದು ಖುಷಿ ತಂದಿದೆ. ನನ್ನ ಗುರಿ ಒಂದೇ ಭಾರತೀಯರು ಹೆಮ್ಮೆಪಡುವಂತ ಕೆಲಸ ಮಾಡುವುದು. 1.4 ಬಿಲಿಯನ್ ಭಾರತೀಯರ ಕನಸಿಗೆ ಹೆಗಲು ಕೊಡುವುದು ಎಂದು ಬರೆದುಕೊಂಡಿದ್ದಾರೆ.


