ಮುಂಬೈ : 45 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ನಡೆಯುವ ಪಂದ್ಯಾವಳಿಗಳು ಅಥವಾ ಸರಣಿಗಳಿಗಾಗಿ, ಆಟಗಾರರ ಕುಟುಂಬಗಳು ಗರಿಷ್ಠ 14 ದಿನಗಳವರೆಗೆ ಮಾತ್ರ ಅವರೊಂದಿಗೆ ಹೋಗಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮತಿ
ನೀಡಲು ನಿರ್ಧರಿಸಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 1-3 ಅಂತರದಲ್ಲಿ ಸೋತ ಭಾರತದ ನಿರಾಶಾದಾಯಕ ಪ್ರದರ್ಶನದ ನಂತರ, ಪ್ರವಾಸ ಸಮಯದಲ್ಲಿ ಕುಟುಂಬದ ಸದಸ್ಯರು ಉಳಿದುಕೊಳ್ಳುವ ನಿರ್ಬಂಧಗಳನ್ನು ಒಳಗೊಂಡAತೆ ಭಾರತ ತಂಡಕ್ಕೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪರಿಚಯಿಸಲು ಬಿಸಿಸಿಐ ತೀರ್ಮಾನಿಸಿದೆ.
ಸಧ್ಯ ಭಾರತೀಯ ಆಟಗಾರರು ಸ್ವದೇಶದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಸರಣಿಯ ಸಂಪೂರ್ಣ ಅವಧಿಯವರೆಗೆ ಅವರ ಪತ್ನಿಯರು ಮತ್ತು ಮಕ್ಕಳನ್ನು ಅವರೊಂದಿಗೆ ಇರಲು ಅನುಮತಿ ಇದೆ. ಆದರೆ ಈಗ ನಿಯಮಕ್ಕೆ ತಿದ್ದುಪಡಿ ತಂದು ಗರಿಷ್ಠ ಹದಿನಾಲ್ಕು ದಿನ ಮಾತ್ರ ಆಟಗಾರರ ಕುಟುಂಬ ಸದಸ್ಯರು ಇರಬಹುದಾಗಿದೆ.
ಮುಂಬೈನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಒಳಗೊಂಡ ಪರಿಶೀಲನಾ ಸಭೆಯ ನಂತರ, ಬಿಸಿಸಿಐ ಉನ್ನತ ಅಧಿಕಾರಿಗಳು ಈ ನವೀಕರಿಸಿದ ಮಾರ್ಗಸೂಚಿಗಳನ್ನು ರಚಿಸುತ್ತಿದ್ದಾರೆ. ಹೊಸ ನೀತಿಯ ಅಡಿಯಲ್ಲಿ, 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪಂದ್ಯಾವಳಿಗಳು ಅಥವಾ ಸರಣಿಗಳಿಗೆ, ಆಟಗಾರರ ಕುಟುಂಬಗಳು ಗರಿಷ್ಠ 14 ದಿನಗಳವರೆಗೆ ಅವರೊಂದಿಗೆ ಹೋಗಲು ಅನುಮತಿಸಲಾಗುತ್ತದೆ.