ಮಡಿಕೇರಿ : ಜೇಬುಗಳ್ಳರು ಎಲ್ಲಿ ಅವಕಾಶ ಸಿಗುತ್ತೆ ಅಂತ ಕಾಯುತ್ತ ಇರುತ್ತಾರೆ ಆದರೆ ಬುಧವಾರ ಮಡಿಕೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಾಲ್ಗೊಂಡಿದ್ದ ಬಿಜೆಪಿ ಚುನಾವಣಾ ರ‍್ಯಾಲಿಯಲ್ಲಿ ಜೇಬುಗಳ್ಳರು ತಮ್ಮ ಕೈಚಳಕ ತೋರಿಸಿದ್ದು, ಮಾಜಿ ಶಾಸಕರಾದ ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್ ಸೇರಿದಂತೆ ಕನಿಷ್ಠ ಏಳು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪರ್ಸ್ ಕಳವಾಗಿದೆ.
ಕುಶಾಲನಗರ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖದೀಮರು ಅನೇಕರ ಪರ್ಸ್ ಎಗರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ ಬೋಪಯ್ಯ ಅವರ ಪರ್ಸ್ ಸಹ ಕಳ್ಳತನವಾಗಿದೆ. ಅಪ್ಪಚ್ಚು ರಂಜನ್ ಅವರ ಪರ್ಸ್ನಲ್ಲಿ 25000 ರೂ ಹಾಗೂ ಬೋಪಯ್ಯ ಅವರ ಪರ್ಸ್ನಲ್ಲಿ 17000 ರೂ. ಇತ್ತು. ಇವರಿಬ್ಬರ ಜೊತೆಗೆ ಇನ್ನೂ ಅನೇಕರ ಜೇಬಿನಲ್ಲಿದ್ದ ಪರ್ಸ್ ಕಳ್ಳತನವಾಗಿದ್ದು, ಒಟ್ಟು ಅಂದಾಜು 5 ಲಕ್ಷ ರೂ. ಅಧಿಕ ಹಣ ಲಪಟಾಯಿಸಿದ್ದಾರೆ.
ಮೈಸೂರು – ಮಡಿಕೇರಿ ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಬೇಕಂತಲೇ ನೂಕು ನುಗ್ಗಲು ಸೃಷ್ಟಿ ಹಲವರ ಪರ್ಸ್ ಎಗರಿಸಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡೇ ಹೊರ ಜಿಲ್ಲೆಯಿಂದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದ್ದು, ಕಳ್ಳರ ಪತ್ತೆಗೆ ಮಡಿಕೇರಿ ನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಈ ಘಟನೆಗಳ ಹಿಂದೆ ‘ಹೊರಗಿನವರ’ ಕೈವಾಡವಿದೆ ಎಂದು ಅಪ್ಪಚ್ಚು ರಂಜನ್ ಶಂಕಿಸಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ವೇದಿಕೆ ಬಳಿ ಧಾವಿಸಿದಾಗ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಒಟ್ಟು ಸುಮಾರು 5 ಲಕ್ಷ ರೂಪಾಯಿ ನಗದನ್ನು ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


