ಮಡಿಕೇರಿ : ಕುಶಾಲನಗರ ತಾಲೂಕು ದುಬಾರೆ ಸಮೀಪ ಪ್ರವಾಸಿಗರಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಾಡಾನೆಯ ಲಗ್ಗೆಯಿಂದ ಕಾರಿಗೆ ಹಾನಿಯಾಗಿದ್ದು, ಅದರಲ್ಲಿದ್ದ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಭಂದ ಅರಣ್ಯ ಇಲಾಖೆ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿಗೆ ಭೇಟಿ ನೀಡಿದ್ದ ಬೆಂಗಳೂರಿನ ದಂಪತಿ ದುಬಾರೆ ಆನೆ ಶಿಬಿರದ ಕಡೆಗೆ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಚೆಟ್ಟಳ್ಳಿಯಿಂದ ದುಬಾರೆಗೆ ತೆರಳುತ್ತಿದ್ದಾಗ ಅರಣ್ಯದ ಅಂಚಿನಿಂದ ಏಕಾಏಕಿ ಕಾಡಾನೆಯೊಂದು ಕಾಣಿಸಿಕೊಂಡು ವಾಹನದ ಮೇಲೆ ದಾಳಿ ಮಾಡಿದೆ. ಟ್ಯಾಕ್ಸಿ ಚಾಲಕ ಹಾಗೂ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾದರು. ಆದರೆ ದಾಳಿಯಲ್ಲಿ ಕಾರು ಜಖಂಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಈ ನಡುವೆ ಅನೇಕ ಜನರು ಮೃತಪಟ್ಟಿದ್ದಾರೆ. ಘಟನೆಯ ನಂತರ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆನೆಗಳನ್ನು ಮರಳಿ ಕಾಡಿಗೆ ಓಡಿಸುವುದಾಗಿ ಅಧಿಕಾರಿಗಳು ದೃಢಪಡಿಸಿದ ನಂತರ, ಕ್ಷಿಪ್ರ ಪ್ರತಿಕ್ರಿಯೆ ತಂಡ ಅರಣ್ಯದ ಅಂಚಿನಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ರೇಂಜ್ ಫಾರೆಸ್ಟ್ ಆಫೀಸರ್ ರತನ್ ಅವರು ತಿಳಿಸಿದ್ದಾರೆ.


