ಮಡಿಕೇರಿ ; ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ, ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿ ಮತ್ತು ಮೊಬೈಲ್ ನಲ್ಲಿ ಮಾತನಾಡಬೇಡಿ ಎಂದು ಪೊಲೀಸ್ ಇಲಾಖೆ ಅರಿವು ಮೂಡಿಸುತ್ತಲೇ ಇರುತ್ತದೆ. ಆದರೆ ಇದಕ್ಕೆ ಸೊಪ್ಪು ಹಾಕದ ಇಲ್ಲೋರ್ವ ಚಾಲಕ ಈ ಎಲ್ಲ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಬರೋಬ್ಬರಿ 60 ಸಾವಿರ ದಂಡ ಕಕ್ಕಿದ್ದಾನೆ!
ಕುಶಾಲನಗರ ಸಂಚಾರ ಪೊಲೀಸ್ ಠಾಣಾ ಪೊಲೀಸರು ಕೊಪ್ಪ ಗೇಟ್ ಬಳಿ ದಿನಾಂಕ 28/02/2025 ರಂದು ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ KA -45 -M 5604 ಕಾರಿನ ಚಾಲಕನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಚಾಲಕನ ಹಳೆಯ IMV ಪ್ರಕರಣಗಳನ್ನು ಪರಿಶೀಲಿಸಿದಾಗ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ 90 ಮತ್ತು ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡಿದ 2 ಪ್ರಕರಣಗಳು ಕಂಡುಬಂದಿವೆ.
ಈ ಎಲ್ಲಾ ಪ್ರಕರಣಗಳಲ್ಲಿ ಕುಶಾಲನಗರ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರು ಚಾಲಕನಿಗೆ ರೂ. 60,000 ದಂಡವನ್ನು ವಿಧಿಸಿದ್ದಾರೆ.