ಮಡಿಕೇರಿ ; ಕೊಡಗಿನ ಗಡಿಯಿಂದ 20 ಕಿ.ಮೀ ದೂರದಲ್ಲಿರುವ ಕಣ್ಣೂರು ಜಿಲ್ಲೆಯ ಕಲ್ಲಿಟ್ಟಪುನ್ನುಪಾರ ಗ್ರಾಮದ ಮನೆಗೆ ಐವರು ನಕ್ಸಲರ ತಂಡ ಭೇಟಿ ನೀಡಿದೆ. ತಂಡ ಊಟ ಮುಗಿಸಿ ಮನೆಯಿಂದ ಹೊರಟಿದೆ ಎಂದು ಮೂಲಗಳು ತಿಳಿಸಿವೆ.
ಮಹಿಳೆ ಹಾಗೂ ನಾಲ್ವರು ಪುರುಷರನ್ನು ಒಳಗೊಂಡ ತಂಡ ಬಿಜು ಎಂಬುವರಿಗೆ ಸೇರಿದ ಮನೆಗೆ ಬಂದಿತ್ತು. ಮನೆಯವರನ್ನು ಬೆದರಿಸಿ ಊಟ ಬಡಿಸುವಂತೆ ಹೇಳಿದ್ದಾರೆ. ಅವರ ಮೊಬೈಲ್ ಫೋನ್ ಮತ್ತು ಪವರ್ ಬ್ಯಾಂಕ್ ಚಾರ್ಜ್ ಮಾಡಿ ನಾಲ್ಕು ಕೆಜಿ ಅಕ್ಕಿ ಮತ್ತು ತರಕಾರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಾಲ್ವರು ನಕ್ಸಲರನ್ನು ಮೊಯಿದ್ದೀನ್, ಸಂತೋಷ್, ರಮೇಶ್ ಮತ್ತು ಜಿಶಾ ಎಂದು ಗುರುತಿಸಲಾಗಿದ್ದು, ಶಸ್ತ್ರಸಜ್ಜಿತರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಮತ್ತು ಕೇರಳ ಸರ್ಕಾರಗಳ ವಿರುದ್ಧ ನಕ್ಸಲರು ಆಕ್ರೋಶ ವ್ಯಕ್ತಪಡಿಸಿದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಬಿರುನಾಣಿ-ಪೂಕೋಳ ರಸ್ತೆಯಿಂದ 60 ಕಿ.ಮೀ ದೂರದಲ್ಲಿ ನಕ್ಸಲ್ ಚಲನವಲನ ವರದಿಯಾಗಿರುವ ಪ್ರದೇಶವಿದೆ. ಕರ್ನಾಟಕದ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.


