ಮಡಿಕೇರಿ : ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲಾದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ಚಿಕ್ಕತ್ತೂರು ಗ್ರಾಮದ ಶ್ರೀನಿವಾಸ್(24) ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಮೃತರನ್ನು ಮುಳ್ಳುಸೋಗೆ, ಚಿಕ್ಕತ್ತೂರು ಮತ್ತು ಹೆಬ್ಬಾಲೆಯ ಯುವಕರುಗಳಾದ ಸಚಿನ್, ವಿನೋದ್ ಮತ್ತು ಶ್ರೀನಿವಾಸ್ ಎಂದು ತಿಳಿದುಬಂದಿದೆ. ಇವರ ಪೈಕಿ ಶ್ರೀನಿವಾಸ್ ಎಂಬುವವರ ಮೃತದೇಹವನ್ನು ಕುಶಾಲನಗರ ಅಗ್ನಿ ಶಾಮಕ ದಳ ಮತ್ತು ತುರ್ತು ಸೇವೆಗಳ ತಂಡದವರು ನೀರಿನಿಂದ ಮೇಲಕ್ಕೆ ತಂದಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಜತೆಯಾಗಿ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದ್ದು, ಯುವಕರು ಒಂದೇ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಕಾರು ನದಿಯ ಬದಿಯಲ್ಲಿ ನಿಂತಿದೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


