ಮಂಡ್ಯ : ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಬಸವನಬೆಟ್ಟದಲ್ಲಿ ಮಂಗಳವಾರ ಸಂಜೆ ಸರಕು ಸಾಗಣೆ ವಾಹನ ಪಲ್ಟಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಳವಳ್ಳಿ ಸಮೀಪದ ತಮ್ಮಡಹಳ್ಳಿಯ ಮಂಗಳಮ್ಮ (50) ಮೃತ ದುರ್ದೈವಿ ಎಂದು ತಿಳಿದಿದೆ . ತಮ್ಮಡಹಳ್ಳಿಯ ಮಾರಮ್ಮ ದೇವಸ್ಥಾನಕ್ಕೆ ನೂತನ ಅರ್ಚಕರನ್ನು ಆಯ್ಕೆ ಮಾಡಲು ಗಂಗಾ ಮಠ ಮತ್ತು ಒಕ್ಕಲಿಗ ಸಮುದಾಯದ ಸುಮಾರು 200 ಮಂದಿ ಮೂರು ಕ್ಯಾಂಟರ್ ವಾಹನಗಳಲ್ಲಿ ಬಸವನಹಳ್ಳಿಗೆ ತೆರಳಿದ್ದರು ಎನ್ನಲಾಗಿದೆ. ಅವರು ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ಹಾಗೂ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. 2012ರಲ್ಲಿ ಇದೇ ಸ್ಥಳದಲ್ಲಿ ಅವಘಡ ಸಂಭವಿಸಿ 13 ಮಂದಿ ಸಾವನ್ನಪ್ಪಿದ್ದರು ಎನ್ನಲಾಗಿದ್ದು, ಸ್ಥಳಕ್ಕೆ ತಡೆಗೋಡೆ ನಿರ್ಮಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ.


