ಉಳ್ಳಾಲ: ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಹೊಟೇಲ್ ಉದ್ಯೋಗಿ ಹಾಗೂ ಝೊಮ್ಯಾಟೋ ಡೆಲಿವರಿ ಬಾಯ್ ಓರ್ವರು ಸಾವನ್ನಪ್ಪಿರುವ ಘಟನೆ ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ಸಂಭವಿಸಿದೆ.
ಮೂಲತ: ಕ್ಯಾಲಿಕಟ್ ನಿವಾಸಿ, ಕುತ್ತಾರು ಸಂತೋಷನಗರದ ಬಾಡಿಗೆ ಮನೆ ನಿವಾಸಿ ಅನಿಲ್ ಕುಮಾರ್ (41) ಮೃತರು.ಅನಿಲ್ ಝೊಮ್ಯಾಟೋ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಹಾಗೂ ಸಂಜೆ ಹೊತ್ತಲ್ಲಿ ದೇರಳಕಟ್ಟೆಯ ಜ್ಯೂಸ್ ಮ್ಯಾಜಿಕ್ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 11.00 ಗಂಟೆ ಸುಮಾರಿಗೆ ಮಂಜನಾಡಿಯ ಕಲ್ಕಟ್ಟ ಮಾರ್ಗವಾಗಿ ಫುಡ್ ಡೆಲಿವರಿ ಆರ್ಡರ್ ಹಿಡಿದುಕೊಂಡು ತೆರಳುವ ಸಂದರ್ಭ ಎದುರಿಂದ ಧಾವಿಸಿದ ಕಾರು ಢಿಕ್ಕಿ ಹೊಡೆದಿದೆ. ಕೇರಳ ನೋಂದಣಿಯ ಕಾರನ್ನ ಅಬೂಬಕರ್ ಸಿದ್ದೀಖ್ ಎಂಬವರು ಚಲಾಯಿಸುತ್ತಿದ್ದರೆನ್ನಲಾಗಿದೆ.
ಅಪಘಾತ ನಡೆಸಿದ ಕಾರಿನಲ್ಲೇ ಗಾಯಾಳುವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ 1.45ರ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ಸಾವನ್ನಪ್ಪಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.