ಮಂಗಳೂರು ; ಮಂಗಳೂರಿನಲ್ಲಿ 90 ಲಕ್ಷ ರೂಪಾಯಿ ಮೌಲ್ಯದ ಅಂಬರ್ಗ್ರಿಸ್ ಅನ್ನು ಸ್ವಾಧೀನಪಡಿಸಿಕೊಂಡು ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ನಗರ ಅಪರಾಧ ವಿಭಾಗದ ಪೊಲೀಸರು ಸೋಮವಾರ ಪಣಂಬೂರು ಬೀಚ್ ಬಳಿ ದಾಳಿ ನಡೆಸಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಆರೋಪಿಗಳನ್ನು ಉಡುಪಿಯ ಸಾಲಿಗ್ರಾಮದ ಜಯಕರ (39) ಶಿವಮೊಗ್ಗದ ಸಾಗರದ ಆದಿತ್ಯ (25) ಮತ್ತು ಶಿಗ್ಗಾಂವ ಹಾವೇರಿ ಜಿಲ್ಲೆಯ ಲೋಹಿತ್ ಕುಮಾರ್ ಗುರುಪ್ಪಬಾವರ್ (39) ಎಂದು ಗುರುತಿಸಲಾಗಿದೆ. ಸ್ಪಮ್‌ರ್‍ವೇಲ್ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕಾರಣ ಭಾರತ, ಅಮೆರಿಕ, ಆಸ್ಪ್ರೇಲಿಯಾ ಸೇರಿದಂತೆ 40 ದೇಶಗಳಲ್ಲಿ ಆ್ಯಂಬರ್‌ಗ್ರಿಸ್ (Ambergris) ಮಾರಾಟಕ್ಕೆ ನಿಷೇಧವಿದೆ. ತಿಮಿಂಗಿಲ ವಾಂತಿ! ವ್ಯಾಕ್... ವಾಂತಿ ಅಂದಾಕ್ಷಣ ವಾಕರಿಕೆ ಬರುತ್ತದೆ. ಆದರೆ ‘ತಿಮಿಂಗಲ ವಾಂತಿ’ (Whale Vomit) ಎಂದಾಕ್ಷಣ, ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧೀಶನನ್ನಾಗಿಸುವ ಅದೃಷ್ಟವೊಂದು ಚಕ್ಕನೆ ಬಾಗಿಲು ಬಡಿದಂತಾಗುತ್ತದೆ. ಇದೇ ದುರಾಸೆಗೆ ಬಿದ್ದು ಕಳೆದ ಆರು ತಿಂಗಳ ಅವಧಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ 50ಕ್ಕೂ ಹೆಚ್ಚು ಜನ ಜೈಲು ಸೇರಿದ್ದಾರೆ. ನೂರಾರು ಕೋಟಿ ರು. ಬೆಲೆ ಬಾಳುವ ‘ತಿಮಿಂಗಲ ವಾಂತಿ’ ಜಪ್ತಿಯಾಗಿದೆ. ಮುಂಬೈ, ಬೆಂಗಳೂರಿನಂತಹ ಮಹಾನಗರಗಳು ಮಾತ್ರವೇ ಅಲ್ಲದೆ, ಹೊಸಪೇಟೆಯಂತಹ ಪುಟ್ಟನಗರಗಳಲ್ಲೂ ಇದರ ಕಳ್ಳ ಸಾಗಣೆ ಪತ್ತೆಯಾಗಿದೆ. ಸದ್ಯ 1 ಕೆ.ಜಿ. ತಿಮಿಂಗಿಲ ವಾಂತಿಗೆ ಒಂದು ಕೋಟಿ ರು.ಗಿಂತ ಅಧಿಕ ಬೆಲೆ ಇದೆ. ಚಿನಿವಾರಪೇಟೆಯಲ್ಲಿ ಒಂದು ಕೆ.ಜಿ. ಚಿನ್ನಕ್ಕಿರುವ ದರ ಹೆಚ್ಚೆಂದರೆ 50 ಲಕ್ಷ ರು. ‘ತಿಮಿಂಗಿಲ ವಾಂತಿ’ ಎಂಬ ಹೆಸರಿನಿಂದ ಕುಖ್ಯಾತಿಗೀಡಾಗಿರುವ ವಸ್ತುವಿನ ಹೆಸರು ‘ಆ್ಯಂಬರ್‌ಗ್ರಿಸ್’(Ambergris) ವಾಸ್ತವವಾಗಿ ಇದು ತಿಮಿಂಗಿಲದ ವಾಂತಿಯಲ್ಲ. ತಿಮಿಂಗಿಲದ ಹೊಟ್ಟೆಯಲ್ಲಿ ಸೃಷ್ಟಿಯಾಗಿ ಗುದದ್ವಾರದಿಂದ ಹೊರಬರುವ ಮೇಣದಂತಹ ವಸ್ತು. ಇದರ ಬಗ್ಗೆ ಹಲವು ಕತೆ-ದಂತಕತೆಗಳಿವೆ. 50 ವರ್ಷ ಸಂಶೋಧನೆ ಮಾಡಿದವರಿದ್ದಾರೆ. ಹತ್ತಾರು ವರ್ಷ ಇದನ್ನು ಸಂಗ್ರಹಿಸಲು ಹುಚ್ಚರಂತೆ ಅಲೆದವರಿದ್ದಾರೆ. ಚಂಡಮಾರುತಗಳು ಆ್ಯಂಬರ್‌ಗ್ರಿಸ್ (Ambergris) ಅನ್ನು ತೀರದತ್ತ ಹೊತ್ತು ತರಬಹುದು ಎಂಬ ನಿರೀಕ್ಷೆಯೊಂದಿಗೆ ಚಂಡಮಾರುತಗಳ ಮೇಲೆ ನಿಗಾ ಇಡುವ ಜಾಲಗಳೂ ಇವೆ. ಚಂಡಮಾರುತ ಅಪ್ಪಳಿಸಿದ ಬಳಿಕ ತೀರಪ್ರದೇಶದಲ್ಲಿ ಆ್ಯಂಬರ್‌ಗ್ರಿಸ್‌ಗಾಗಿ ಜಾಲಾಡುವ ತಂಡಗಳೂ ವಿಶ್ವದ ವಿವಿಧೆಡೆ ಇವೆ. ಇಷ್ಟೆಲ್ಲಾ ನಿದ್ರೆಗೆಡಿಸಿರುವ ಆ್ಯಂಬರ್‌ಗ್ರಿಸ್ ಸೃಷ್ಟಿಯಾಗುವುದು ‘ಸ್ಪರ್ಮ್ ವೇಲ್’ (Sterm Whale) ಎಂಬ ತಿಮಿಂಗಿಲ ತಳಿಯೊಂದರಲ್ಲಿ. ಈ ಸ್ಪರ್ಮ್ ವೇಲ್‌ಗಳು ನಮ್ಮೂರಿನಲ್ಲಿ ಓಡಾಡುವ ಬಸ್‌ಗಳಿಗಿಂತ ಉದ್ದವಿರುವ (49ರಿಂದ 59 ಅಡಿ ಉದ್ದ), 35ರಿಂದ 45 ಟನ್ ಭಾರದ ದೈತ್ಯ ಪ್ರಾಣಿಗಳು. ಜಗತ್ತಿನ ಯಾವುದೇ ಸೃಷ್ಟಿಯಲ್ಲಿ ಕಂಡುಬರದ ಅತ್ಯಂತ ಬೃಹತ್ತಾದ ಮೆದುಳು ಇವುಗಳಲ್ಲಿದೆ. ಸ್ಪರ್ಮ್ ವೇಲ್ ತಲೆಯಲ್ಲಿ ಎಣ್ಣೆಯಂತಹ ದ್ರವ ಇರುತ್ತದೆ. ಪುರಾತನ ನಾಗರಿಕತೆಯ ಕಾಲದಲ್ಲಿ ದೀಪಗಳನ್ನು ಬೆಳಗಲು ಈ ಸ್ಪಮ್‌ರ್ ವೇಲ್‌ಗಳನ್ನು ಕೊಂದು ಅದರ ಎಣ್ಣೆ ಸಂಗ್ರಹಿಸುವ ಪದ್ಧತಿ ಇತ್ತು. ಈ ತಿಮಿಂಗಿಲಗಳ ಆಹಾರ ಮೀನು ಹಾಗೂ ‘ಸ್ಕ್ವಿಡ್'’ ಎಂಬ ಕೊಕ್ಕು ಹೊಂದಿರುವ ಸಮುದ್ರ ಜೀವಿ. ದಿನವೊಂದಕ್ಕೆ ಟನ್‌ಗಟ್ಟಲೆ ಆಹಾರ ಬೇಕು ಈ ಜೀವಿಗೆ. ಯಾಕೆ ಇದು ಇಷ್ಟೊಂದು ದುಬಾರಿ? ನಾವು ಬಳಸುವ ಸುಗಂಧದ್ರವ್ಯಗಳು ಸುದೀರ್ಘ ಅವಧಿಗೆ ಪರಿಮಳವನ್ನು ಹೊರಸೂಸುವುದಿಲ್ಲ. ಎಷ್ಟೇ ಸಾವಿರ, ಲಕ್ಷ ರುಪಾಯಿ ಕೊಟ್ಟು ಪರ್ಫ್ಯೂಮ್ ಖರೀದಿಸಿದರೂ ಒಂದಷ್ಟು ಸಮಯದ ಬಳಿಕ ಅದರ ಸುಗಂಧ ಕಡಮೆಯಾಗಿಬಿಡುತ್ತದೆ. ಆದರೆ ವಿಶ್ವದಲ್ಲಿ ಲಭ್ಯ ಇರುವ ಎಲ್ಲ ಸುಗಂಧದ್ರವ್ಯಗಳಿಗಿಂತ ಸುದೀರ್ಘ ಅವಧಿಗೆ ಸುವಾಸನೆಯನ್ನು ಹೊರಸೂಸುವ ವಿಶಿಷ್ಟಗುಣ ಆ್ಯಂಬರ್‌ಗ್ರಿಸ್‌ಗೆ ಇದೆ. ಸುಮಾರು 1000 ವರ್ಷಗಳಿಂದ ಇದು ಪ್ರಪಂಚದಲ್ಲಿ ಬಳಕೆಯಲ್ಲಿದೆ. ಸುಗಂಧ ದ್ರವ್ಯ ತಯಾರಿಕೆಗೆ ಆ್ಯಂಬರ್‌ಗ್ರಿಸ್‌ನ ಬಳಕೆ ಆರಂಭವಾಗಿದ್ದೇ ಅರಬ್ ನಾಡಿನಲ್ಲಿ. ಈಜಿಪ್ಟ್‌ನಲ್ಲಿ ಇದನ್ನು ಬಳಸಿ ಊದುಬತ್ತಿ ಉತ್ಪಾದಿಸಲಾಗುತ್ತಿತ್ತು. ಆ್ಯಂಬರ್‌ಗ್ರಿಸ್‌ನ ಉಪಯೋಗ ಅರಬ್ ನಾಡಿನಿಂದ ಐರೋಪ್ಯ ದೇಶಗಳಿಗೆ ಪರಿಚಯವಾಯಿತು. 13ನೇ ಶತಮಾನದಲ್ಲಿ ಪ್ಲೇಗ್ ಬಂದು ಯುರೋಪ್‌ನ ಜನ ಎಲ್ಲೆಂದರಲ್ಲಿ ಸಾಯತೊಡಗಿದಾಗ, ದುರ್ವಾಸನೆಯಿಂದ ಪ್ಲೇಗ್ ಬರುತ್ತದೆ ಎಂಬ ಮೂಢನಂಬಿಕೆಗೆ ಒಳಗಾದ ಜನರು ಕುತ್ತಿಗೆ, ಸೊಂಟಕ್ಕೆ ಆ್ಯಂಬರ್‌ಗ್ರಿಸ್ ಧರಿಸಿ ಪರಿಮಳ ಸೂಸುತ್ತಾ ಓಡಾಡುತ್ತಿದ್ದರು. ಬ್ರಿಟನ್‌ನ ರಾಜ 2 ನೇ ಚಾರ್ಲ್ಸ್ ಮೊಟ್ಟೆಗೆ ಆ್ಯಂಬರ್‌ಗ್ರಿಸ್ ಹಾಕಿಕೊಂಡು ತಿನ್ನುತ್ತಿದ್ದರು ಎಂಬೆಲ್ಲಾ ದಂತಕತೆಗಳು ಇವೆ. 19ನೇ ಶತಮಾನದಿಂದ ಕೃತಕ ಆ್ಯಂಬರ್‌ಗ್ರಿಸ್ ಬಳಕೆಯಲ್ಲಿದೆಯಾದರೂ, ಆದರೆ ನೈಸರ್ಗಿಕ ಆ್ಯಂಬರ್‌ಗ್ರಿಸ್‌ಗೆ ಅದು ಸಾಟಿಯೇ ಅಲ್ಲ. ಹೀಗಾಗಿ ಇವತ್ತಿಗೂ ವಿಶ್ವ ಸುಗಂಧ ದ್ರವ್ಯ ಮಾರುಕಟ್ಟೆಯಲ್ಲಿ ಆ್ಯಂಬರ್‌ಗ್ರಿಸ್‌ಗೆ ಬಲು ಬೇಡಿಕೆಯಿದೆ. ಶ್ರೀಮಂತರು ಬಳಸುವ ಅತ್ಯಂತ ದುಬಾರಿ ಪಫ್ರ್ಯೂಮ್‌ಗಳಿಗೆ ಆ್ಯಂಬರ್‌ಗ್ರಿಸ್ ಬೇಕೇಬೇಕು. ಹೀಗಾಗಿ ಆ್ಯಂಬರ್‌ಗ್ರಿಸ್ ಹುಲುಸಾದ ದಂಧೆ. ಕೆಲವೊಂದು ದೇಶಗಳಲ್ಲಿ ಆ್ಯಂಬರ್‌ಗ್ರಿಸ್ ಹೊಂದಿದವರು, ಅದನ್ನು ಖರೀದಿಸುವವರ ನಡುವೆ ಸಂಪರ್ಕ ಏರ್ಪಡಿಸಲು ದಲ್ಲಾಳಿ ಸಂಸ್ಥೆಗಳೇ ಇವೆ.