ಮಂಗಳೂರು ; ತುಳುನಾಡಿನ ಕಂಬಳ ತಿರುವೈಲೋತ್ಸವಕ್ಕೆ ಇಂದು ವಾಮಂಜೂರು ಅಮೃತೇಶ್ವರ ದೇವಸ್ಥಾನದ ಮುಂಭಾಗದ ನಡೆಯುವ ದೇವರ ಕಂಬಳ ಎಂಬ ಪ್ರಸಿದ್ಧಿ ಪಡೆದ ದೇವರ ಗರ್ಭ ಗುಡಿಗೆ ಅಭಿಮುಖವಾಗಿ ಇರುವ ಗದ್ದೆಯಲ್ಲಿ ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳಕ್ಕೆ ಅದ್ದೂರಿ ಚಾಲನೆ ದೊರೆತಿದೆ.



ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಹಾಗೂ ಪ್ರವೀಣ್ ಚಂದ್ರ ಆಳ್ವಾರವರ ನೇತೃತ್ವದಲ್ಲಿ ನಡೆಯುವ ವಾಮಂಜೂರು ಅಮೃತೇಶ್ವರ ದೇವಸ್ಥಾನದ ಮುಂಭಾಗದ ನಡೆಯುವ ಕಂಬಳಕ್ಕೆ ದೇವರ ಕಂಬಳ ಎಂಬ ಪ್ರಸಿದ್ಧಿಯೂ ಇದೆ. ದೇವರ ಗರ್ಭ ಗುಡಿಗೆ ಅಭಿಮುಖವಾಗಿ ಇರುವ ಗದ್ದೆಯಲ್ಲಿ ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ನಡೆಯುತ್ತಿದೆ. 230 ವರ್ಷಗಳ ಹಿಂದೆ ಬದುಕಿದ್ದ ತಿರುವೈಲು ಗುತ್ತಿನ ಕುಟುಂಬಿಕರ ಹಿರಿಯರಾದ ಸಂಕುಪೂಂಜ -ದೇವುಪೂಂಜ ಎಂಬವರ ಹೆಸರಿನಲ್ಲಿ ಈ ಕಂಬಳವನ್ನು ಆಯೋಜನೆ ಮಾಡಲಾಗುತ್ತಿದೆ ಎಂಬುದು ಚರಿತ್ರೆ.
ತಿರುವೈಲುಗುತ್ತು ಸಂಕು ಪೂಂಜ ದೇವು ಪೂಂಜ ಜೋಡುಕರೆ ಕಂಬಳ ಟ್ರಸ್ಟ್ ವತಿಯಿಂದ ನಡೆಯುವ ೧೪ ನೇ ವರ್ಷದ ಕಂಬಳದ ಉದ್ಘಾಟನೆ ಇಂದು ಮುಂಜಾನೆ ನಡೆಯಿತು. ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ದೀಪ ಬೆಳಗಿಸುವ ಕಂಬಳಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, “ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಮರಸ್ಯಕ್ಕೆ ಮಾದರಿಯಾಗಿ ಸಂಕು ಪೂಂಜ ದೇವು ಪೂಂಜ ಕಂಬಳ ನಡೆಯುತ್ತಿದೆ. ಕಂಬಳ ಎಂದರೆ ಪ್ರೀತಿ ಯುವಕರನ್ನು ಒಂದು ಮಾಡುವ ಕ್ರೀಡೆ.೧೪ ವರ್ಷದ ಒಗ್ಗಟ್ಟು ಪ್ರದರ್ಶಿಸುವುದು ಅಶ್ರು ಸುಲಭವಲ್ಲ ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಕೂಡ ದೇವರ ಆಶೀರ್ವಾದ ದೇವರ ಸೃಷ್ಟಿಯಂತೆ ನಾವು ನಡೆಯುವುದು ನಮ್ಮ ದಾರಿ ಎಂದು ಹೇಳಿದರು. ಕಂಬಳಕ್ಕೆ ರಾಜ್ಯ ಸರಕಾರ ಆರ್ಥಿಕ ಬೆಂಬಲ ನೀಡುತ್ತಿರುವುದು ಮೆಚ್ಚತಕ್ಕ ವಿಚಾರ. ಮುಂದಿನ ದಿನಗಳಲ್ಲಿ 50 ಲಕ್ಷ ರೂ. ಅಲ್ಲದಿದ್ದರೂ 25 ಲಕ್ಷ ರೂಪಾಯಿಯನ್ನಾದರೂ ಕಂಬಳಕ್ಕೆ ನೀಡಬೇಕು” ಎಂದರು.
“ವಾಮಂಜೂರು ಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಂಬಳ ನಡೆಯುವುದರಿಂದ ಇದನ್ನು ದೇವರ ಕಂಬಳವೆಂದೇ ಕರೆಯುತ್ತಾರೆ. ಕಂಬಳದಿಂದ ಜನರ ನಡುವಿನ ಬೇಧ ದೂರವಾಗಿ ಸಾಮರಸ್ಯ ನೆಲೆಯಾಗಬೇಕು. ತುಳುನಾಡಿನ ಕಂಬಳಕ್ಕೆ ಎಲ್ಲೆಡೆ ಮಾನ್ಯತೆ ಸಿಗಬೇಕು. ಎರಡು ದಿನಗಳ ಕಾಲ ನಡೆಯುವ ವಾಮಂಜೂರು ಕಂಬಳದಲ್ಲಿ ಸುತ್ತಮುತ್ತಲಿನ ಊರುಗಳ ಕಂಬಳ ಪ್ರೇಮಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಮಿಥುನ್ ರೈ ಹೇಳಿದರು.
ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತ ಸದಸ್ಯರಾದ ದಿಲ್ ರಾಜ್ ಆಳ್ವ ಮಾತನಾಡಿ , “ತಿರುವೈಲುಗುತ್ತು ಕಂಬಳ ಇಂದು ಇಡೀ ಊರಿಗೆ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯುವ ತಿರುವೈಲೋತ್ಸವ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ಎಲ್ಲರನ್ನೂ ಒಂದು ಮಾಡುತ್ತಿರುವುದು ಖುಷಿಯ ವಿಚಾರ. ಕಂಬಳ ಪ್ರೇಮಿಗಳು ಹೆಚ್ಚೆಚ್ಚು ಪಾಲ್ಗೊಲ್ಲುವ ಮೂಲಕ ನಮ್ಮ ತುಳುನಾಡಿನ ಜಾನಪದ ಕ್ರೀಡೆಯನ್ನು ಇನ್ನಷ್ಟು ಬೆಳೆಸಬೇಕು” ಎಂದರು. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸೀತಾರಾಮ್ ಜಾನು ಶೆಟ್ಟಿ, ಶಶಿಧರ್ ಶೆಟ್ಟಿ, ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಟ್ರಸ್ಟಿ ಅಭಿಷೇಕ್ ಕೆ.ವಿ., ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜಯ್ಯ ಶೆಟ್ಟಿ, ದಿಲ್ ರಾಜ್ ಆಳ್ವ, ನಿತಿನ್ ಶೆಟ್ಟಿ, ಉಮೇಶ್ ಶೆಟ್ಟಿ ಪದವು ಮೇಗಿನ ಮನೆ, ಓಂಪ್ರಕಾಶ್ ಶೆಟ್ಟಿ, ಅನಿಲ್ ಪೂಜಾರಿ, ಗೋಪಾಲಕೃಷ್ಣ ಭಂಡಾರಿ, ಪುಷ್ಪರಾಜ್ ಶೆಟ್ಟಿ, ಲೊಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ, ಗಿರೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.


